ಹೇಮಂತ್ ರಾವ್ ಸಿನಿಮಾನಲ್ಲಿ ಡಾಲಿ ಧನಂಜಯ್, ಭೈರವನ ಪಾಠ ಏನಾಯ್ತು?
Daali Dhananjay: ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ನಿರ್ದೇಶಿಸಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಜೊತೆಗೆ ನಿರೀಕ್ಷೆ ಹೆಚ್ಚಿಸಿರುವ ನಿರ್ದೇಶಕ ಹೇಮಂತ್ ರಾವ್ ಇದೀಗ ತಮ್ಮ ಮುಂದಿನ ಸಿನಿಮಾ ಅನ್ನು ಡಾಲಿ ಧನಂಜಯ್ಗಾಗಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ದರೆ ಶಿವಣ್ಣನ ಜೊತೆ ಮಾಡಬೇಕಿದ್ದ ಸಿನಿಮಾ ಕತೆ ಏನಾಯ್ತು?

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಬಳಿಕ ಹೇಮಂತ್ ರಾವ್ (Hemanth Rao) ಪ್ರತಿಭೆಯ ಬಗ್ಗೆ ನೆರೆ ಹೊರೆ ರಾಜ್ಯ, ಬಾಲಿವುಡ್ನ ನಿರ್ದೇಶಕರು ಸಹ ಚರ್ಚಿಸುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹೇಮಂತ್ ರಾವ್ ಅವರನ್ನು ಎಲ್ಲಿಗೋ ಕರೆದೊಯ್ದಿದೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಶಿವಣ್ಣನ ಜೊತೆಗೆ ಹೊಸ ಸಿನಿಮಾ ಒಂದನ್ನು ಹೇಮಂತ್ ರಾವ್ ಪ್ರಾರಂಭ ಮಾಡಿದ್ದರು. ಆದರೆ ಆ ಸಿನಿಮಾದ ಚಿತ್ರೀಕರಣ ಶುರುವಾಗಿಲ್ಲ, ಇದೀಗ ಹೇಮಂತ್ ರಾವ್ ಅವರ ಹೊಸ ಸಿನಿಮಾದಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಹೇಮಂತ್ ರಾವ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ ಎನ್ನಲಾಗುತ್ತಿದೆ.
‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಶಿವಣ್ಣನೊಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದರು ಹೇಮಂತ್ ರಾವ್, ಸಿನಿಮಾಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿದ್ದ ಹೇಮಂತ್ ರಾವ್, ಶಿವಣ್ಣನ ಜೊತೆಗೆ ಫೋಟೊಶೂಟ್ ಸಹ ಮಾಡಿಸಿದ್ದರು. ಶಿವಣ್ಣನಿಗೆ ಪಾಳೆಗಾರರ ಕಾಲದ ಕೋಟೆ ಕಾವಲಿನವರ ರೀತಿಯ ಉಡುಗೆ ತೊಡಿಸಿ ಕೈಯಲ್ಲೊಂದು ಉದ್ದನೆಯ ದುರ್ಬೀನು ನೀಡಿದ್ದರು. ಸಿನಿಮಾದ ಪೋಸ್ಟರ್ ಬಿಡುಗಡೆ ಬಳಿಕ ಶಿವಣ್ಣ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದರು. ಇದರಿಂದಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಈಗ ನೋಡಿದರೆ ಹೇಮಂತ್ ರಾವ್, ಡಾಲಿ ಧನಂಜಯ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಶಿವಣ್ಣನ ಜೊತೆ ಮಾಡಬೇಕಿದ್ದ ‘ಭೈರವನ ಕೊನೆ ಪಾಠ’ ಸಿನಿಮಾ ನಿಂತು ಹೋಗಿರುವ ಕಾರಣಕ್ಕೆ ಹೇಮಂತ್ ರಾವ್ ಅವರು ಡಾಲಿ ಜೊತೆ ಸಿನಿಮಾ ಮಾಡುತ್ತಿದ್ದಾರಾ ಅಥವಾ ಶಿವಣ್ಣನ ಆರೋಗ್ಯ ಸಮಸ್ಯೆಯಿಂದಾಗಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ಶಿವಣ್ಣನ ಬದಲಿಗೆ ಡಾಲಿ ಧನಂಜಯ್ಗೆ ಮಾಡುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಡಾಲಿ ಧನಂಜಯ್ ಪ್ರಸ್ತುತ ‘ಉತ್ತರಕಾಂಡ’, ‘ಜಿಂಗೊ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಪರಭಾಷೆ ಸಿನಿಮಾಗಳಲ್ಲಿಯೂ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ಡಾಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ