‘ಕನ್ನಡತಿ’ ರಂಜನಿ ನಿರ್ದೇಶನದ ‘ಡಿ ಡಿ ಢಿಕ್ಕಿ’ ಚಿತ್ರದಲ್ಲಿ ಹತ್ತು ಹಲವು ವಿಶೇಷ
ನಟಿ ರಂಜನಿ ರಾಘವನ್ ಅವರು ಬಹುಮುಖ ಪ್ರತಿಭೆ. ನಟಿಯಾಗಿ ಮಾತ್ರವಲ್ಲದೇ ಅವರು ಬರಹಗಾರ್ತಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಈಗ ಅವರು ನಿರ್ದೇಶಕಿ ಕೂಡ ಆಗಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಡಿ ಡಿ ಢಿಕ್ಕಿ’ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇವೆ. ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.

ನಟಿಯರು ನಿರ್ದೇಶನದ ಪ್ರಯತ್ನ ಮಾಡುವುದು ತುಂಬ ವಿರಳ. ‘ಕನ್ನಡತಿ’ ಸೀರಿಯಲ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ರಂಜನಿ ರಾಘವನ್ (Ranjani Raghavan) ಅವರು ಈಗ ಡೈರೆಕ್ಟರ್ ಆಗಿದ್ದಾರೆ. ಅದು ಕೂಡ ಬೆಳ್ಳಿತೆರೆಯಲ್ಲಿ! ಹೌದು, ರಂಜನಿ ರಾಘವನ್ ಅವರು ‘ಡಿ ಡಿ ಢಿಕ್ಕಿ’ (Di Di Dikki) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾ ತಂಡದಲ್ಲಿ ಸಾಕಷ್ಟು ವಿಶೇಷಗಳಿವೆ. ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರು ಸಂಗೀತ ನೀಡುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಹಾಗೂ ‘ನೆನಪಿರಲಿ’ ಪ್ರೇಮ್ (Nenapirali Prem) ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.
ಈಗಾಗಲೇ ‘ಗುರು ಶಿಷ್ಯರು’, ‘ಲ್ಯಾಂಡ್ ಲಾರ್ಡ್’, ‘ಜಂಟಲ್ಮನ್’ ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕ ಜಡೇಶ್ ಹಂಪಿ ಅವರು ನಿರ್ಮಾಪಕನಾಗಿದ್ದಾರೆ. ‘ಕಾಟೇರ’ ಚಿತ್ರದ ಬರಹಗಾರನಾಗಿ ಖ್ಯಾತಿ ಗಳಿಸಿದ ಅವರು ‘ಹಂಪಿ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದಾರೆ. ವಿಜಯನಗರ ಮೂಲದ ಜಡೇಶ್ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ‘ಹಂಪಿ ಪಿಕ್ಚರ್ಸ್’ ಎಂದು ಹೆಸರು ಇಟ್ಟಿದ್ದಾರೆ. ರಾಮಕೃಷ್ಣ ಮತ್ತು ಆನಂದ್ ಕುಮಾರ್ ಅವರು ‘R K & A k ಎಂಟರ್ಟೈನ್ಮೆಂಟ್’ ಮೂಲಕ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
‘ಡಿ ಡಿ ಢಿಕ್ಕಿ’ ಸಿನಿಮಾಗೆ ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಪ್ರೇಮ್ ಅವರ ಬರ್ತ್ಡೇ ಪ್ರಯುಕ್ತ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಅನಾವರಣ ಮಾಡಲಾಯಿತು. ಅಜಯ್ ರಾವ್ ಅವರು ಅತಿಥಿಯಾಗಿ ಆಗಮಿಸಿ ಶುಭ ಕೋರಿದರು. ಗುರು ದೇಶಪಾಂಡೆ, ಜಗದೀಶ್ ಗೌಡ, ಆರ್ ಎಸ್ ಗೌಡ, ರವಿ ಗೌಡ, ಸೂರಜ್, ಕೃಷ್ಣ ಸಾರ್ಥಕ್ ಮುಂತಾದವರು ಕೂಡ ಹಾಜರಿದ್ದರು.
ಗಣೇಶ್ ಪುತ್ರ ವಿಹಾನ್ ಕೂಡ ವೇದಿಕೆಯಲ್ಲಿ ಮಾತನಾಡಿದರು. ‘ಈ ಅವಕಾಶ ಕೊಟ್ಟಿದ್ದಕ್ಕೆ ರಂಜನಿ ಮತ್ತು ಜಡೇಶ್ ಅವರಿಗೆ ಧನ್ಯವಾದಗಳು. ಶೂಟಿಂಗ್ಗೆ ಬಂದಾಗ ಹೇಗೆ ಇರಬೇಕು ಅಂತ ಅಪ್ಪ ಮತ್ತು ಅಕ್ಕ ಸಲಹೆ ನೀಡುತ್ತಿದ್ದರು. ಸೆಟ್ನಲ್ಲೂ ನಾವು ಕ್ರಿಕೆಟ್ ಆಡುತ್ತಿದ್ದೆವು. ನನ್ನ ಪಾತ್ರ ನನಗೆ ತುಂಬ ಇಷ್ಟ ಆಯಿತು. ಎಲ್ಲ ದೃಶ್ಯಗಳು ಕೂಡ ಇಷ್ಟ ಆಯಿತು’ ಎಂದು ವಿಹಾನ್ ಹೇಳಿದರು.
View this post on Instagram
ಸುದ್ದಿಗೋಷ್ಠಿಯಲ್ಲಿ ನಟ ‘ನೆನಪಿರಲಿ’ ಪ್ರೇಮ್ ಅವರು ಮಾತನಾಡಿದರು. ‘ಈ ಸಿನಿಮಾ ಮಾಡುವಂತೆ ತರುಣ್ ಸುಧೀರ್ ನನಗೆ ಹೇಳಿದ. ಆರಂಭದಲ್ಲಿ ನನಗೆ ಈ ಸಿನಿಮಾ ಮಾಡಲು ಇಷ್ಟ ಇರಲಿಲ್ಲ. ಕಥೆ ಭಿನ್ನವಾಗಿದೆ ಅಂತ ಅವನು ಹೇಳಿದ ಬಳಿಕ ಒಪ್ಪಿಕೊಂಡೆ. ರಂಜನಿ ರಾಘವನ್ ಹೇಳಿದ ಕಥೆ ನನ್ನನ್ನು ಸೆಳೆದುಕೊಂಡಿತು. ಅವರು ಮೊದಲ ನಿರ್ದೇಶನದಲ್ಲೇ ಇಷ್ಟು ಚೆನ್ನಾಗಿ ಕಥೆ ಮಾಡಿರುವುದು ಇಷ್ಟ ಆಯಿತು. ಅದರ ಜೊತೆಗೆ ಹೊಸಬರ ತಂಡಕ್ಕೆ ಬೆಂಬಲ ನೀಡಬೇಕು ಎಂಬ ಕಾರಣಕ್ಕೆ ಒಪ್ಪಿಕೊಂಡೆ’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ ರಾಘವನ್
ನಿರ್ಮಾಪಕ ಜಡೇಶ್ ಮಾತನಾಡಿ, ‘ರಂಜನಿ ರಾಘವನ್ ಬರೆದ ಪುಸ್ತಕ ಓದಿ ಆಶ್ಚರ್ಯ ಆಯಿತು. ಸಿನಿಮಾಗೆ ಹೇಳಿ ಮಾಡಿಸಿದ ಕಥೆ ಎನಿಸಿತು. ತರುಣ್ ಸುಧೀರ್ ಜೊತೆ ಚರ್ಚೆ ಮಾಡಿದೆ. ರಂಜನಿ ಅವರೇ ನಿರ್ದೇಶನ ಮಾಡಲಿ ಎಂದು ನಿರ್ಧಾರವಾಯಿತು’ ಎಂದರು. ತಮ್ಮ ಜೊತೆ ನಿಂತು ಬೆಂಬಲ ನೀಡಿದ ಇಡೀ ತಂಡಕ್ಕೆ ರಂಜನಿ ರಾಘವನ್ ಅವರು ಧನ್ಯವಾದ ತಿಳಿಸಿದರು. ಈ ಸಿನಿಮಾಗೆ ತರುಣ್ ಸುಧೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಧಾಕರ್ ಛಾಯಾಗ್ರಹಣ , ಕೆ.ಎಂ. ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.