ಚಿತ್ರರಂಗಕ್ಕೆ ಯಾರಾಗಬೇಕು ನಾಯಕ? ಹಲವರ ಹೆಸರು ಹೇಳಿದ ಶಿವರಾಜ್ ಕುಮಾರ್

|

Updated on: Jul 22, 2023 | 10:02 PM

Sandalwood: ಸುದೀಪ್-ಕುಮಾರ್ ವಿವಾದದ ಬೆನ್ನಲ್ಲೆ ಚಿತ್ರರಂಗದ ನಾಯಕತ್ವದ ಕೊರತೆ ಚರ್ಚೆ ಮುನ್ನಲೆಗೆ ಬಂದಿದೆ. ಯಾರಾಗ ಬೇಕು ಚಿತ್ರರಂಗದ ನಾಯಕ ಎಂಬ ಪ್ರಶ್ನೆಗೆ ಹಲವರ ಹೆಸರನ್ನು ಶಿವಣ್ಣ ಸೂಚಿಸಿದ್ದಾರೆ.

ಚಿತ್ರರಂಗಕ್ಕೆ ಯಾರಾಗಬೇಕು ನಾಯಕ? ಹಲವರ ಹೆಸರು ಹೇಳಿದ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Follow us on

ಅಂಬರೀಶ್ (Ambareesh) ಕಾಲವಾದ ಬಳಿಕ ಚಿತ್ರರಂಗಕ್ಕೆ (Sandalwood) ನಾಯಕತ್ವದ ಕೊರತೆ ಎದುರಾಗಿದೆ. ಚಿತ್ರರಂಗವನ್ನು ಒಗ್ಗಟ್ಟಾಗಿ ನಡೆಸಬಲ್ಲ ಹಲವು ಶಕ್ತ ನಟರು, ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿದ್ದಾದರೂ ಯಾರೂ ಸಹ ಮುಂದೆ ಬಂದು ಜವಾಬ್ದಾರಿವಹಿಸಿಕೊಳ್ಳುತ್ತಿಲ್ಲ. ನಾಯಕತ್ವ ವಹಿಸಿಕೊಂಡರೆ ನಿಷ್ಠುರರಾಗಿರಬೇಕಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತಿದೆ. ನಾಯಕತ್ವದ ಮಾತು ಬಂದಾಗೆಲ್ಲ ಶಿವರಾಜ್ ಕುಮಾರ್ (Shiva Rajkumar) ಹೆಸರು ಮೊದಲು ಕೇಳಿ ಬರುತ್ತದೆ. ಆದರೆ ಶಿವಣ್ಣ ಮಾತ್ರ ನಾಯಕತ್ವದಿಂದ ದೂರವೇ ಸರಿಯುತ್ತಾರೆ.

ಇದೀಗ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಜಟಾಪಟಿ ವಿವಾದ ಎದುರಾಗಿದ್ದು, ಎಂಎನ್ ಕುಮಾರ್ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುದೀಪ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇತ್ತ ಕುಮಾರ್, ಫಿಲಂ ಚೇಂಬರ್ ಮುಂದೆ ಧರಣಿ ನಡೆಸಿ, ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದರು. ಅದಾದ ಬಳಿಕ ಎಲ್ಲರೂ ಬೊಟ್ಟು ತೋರಿಸಿದ್ದು ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರುಗಳತ್ತ. ಕೊನೆಗೆ ರವಿಚಂದ್ರನ್ ಒಪ್ಪಿ ಸಂಧಾನ ಸಭೆಗೆ ಮುಂದಾಗಿದ್ದಾರೆ.

ಇಂದು (ಜುಲೈ 22) ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ತಂಡದೊಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಅವರಿಗೆ ಶುಭ ಹಾರೈಸಿದ ಶಿವರಾಜ್ ಕುಮಾರ್​ಗೆ ಮತ್ತೊಮ್ಮೆ ನಾಯಕತ್ವದ ಪ್ರಶ್ನೆ ಪತ್ರಕರ್ತರಿಂದ ಎದುರಾಯ್ತು. ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿ ತಮಗಿಲ್ಲ ಎಂದು ಪರೋಕ್ಷವಾಗಿ ಹೇಳಿದ ಶಿವರಾಜ್ ಕುಮಾರ್, ”ಕನ್ನಡ ಚಿತ್ರರಂಗದಲ್ಲಿ ಹಲವು ನಟರಿಗೆ ನಾಯಕತ್ವ ವಹಿಸುವ ಗುಣವಿದೆ. ನಾನೇ ಆಗಿರಬಹುದು, ರವಿಚಂದ್ರನ್, ಸುದೀಪ್, ಅನಂತ್​ನಾಗ್, ಶ್ರೀನಾಥ್ ಇನ್ನೂ ಹಲವರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ಹಿರಿಯರಿದ್ದಾರೆ. ಒಂದು ಸಂಘವನ್ನು ನಡೆಸಿಕೊಂಡು ಹೋಗಲು ಹಿರಿಯರ ಬೆಂಬಲ ಬೇಕಾ-ಬೇಕಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ

ಸುದೀಪ್ ಹಾಗೂ ಕುಮಾರ್ ವಿವಾದದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ”ರವಿಚಂದ್ರನ್ ಅವರು ನನಗೆ ಕರೆ ಮಾಡಿದ್ದರು. ಆದರೆ ನಾನು ಊರಿನಲ್ಲಿ ಇರುವುದಿಲ್ಲ ಎಂದು ಹೇಳಿಕೆ. ನಿನ್ನೆ ಬಹಳ ತಡವಾಗಿ ನಾನು ಬೆಂಗಳೂರಿಗೆ ಬಂದೆ. ಆದರೆ ರವಿಚಂದ್ರನ್ ಅವರು ಏನು ಹೇಳುತ್ತಾರೋ ಆ ಮಾತಿಗೆ ನಾವು ಬದ್ಧ. ಬಹಳ ವರ್ಷಗಳಿಂದಲೂ ನಾವು ಗೆಳೆಯರು. ಅವರು ಹೇಳಿದ ಮಾತೇ ನನ್ನ ಮಾತೂ ಆಗಿರುತ್ತದೆ” ಎಂದಿದ್ದಾರೆ.

”ಚಿತ್ರರಂಗವೆಲ್ಲ ಒಂದೇ ಕುಟುಂಬ. ಸುದೀಪ್ ನನ್ನ ಸಹೋದರರಿದ್ದಂತೆ, ನಿರ್ಮಾಪಕರು ಅನ್ನದಾತರು. ಒಂದು ಕುಟುಂಬ ಎಂದ ಮೇಲೆ ಇಂಥಹಾ ಸಣ್ಣ-ಪುಟ್ಟ ಸಮಸ್ಯೆಗಳು ಬರುತ್ತಲೇ ಇರುತ್ತವೆ, ಹೋಗುತ್ತಲೇ ಇರುತ್ತವೆ. ಎಲ್ಲ ಸಮಸ್ಯೆಗಳು ಇನ್ನೊಂದೆರಡು ದಿನಗಳಲ್ಲಿ ಬಗೆಹರಿಯಲಿವೆ. ಶೀಘ್ರವೇ ಎಲ್ಲವೂ ಇತ್ಯರ್ಥವಾಗಲಿದೆ. ರವಿಚಂದ್ರನ್ ಮೇಲೆ ವಿಶ್ವಾಸವಿದೆ” ಎಂದಿದ್ದಾರೆ ಶಿವರಾಜ್ ಕುಮಾರ್.

ಸುದೀಪ್ ಹಾಗೂ ಕುಮಾರ್ ವಿವಾದದ ಕುರಿತಾಗಿ ನಿನ್ನೆ (ಜುಲೈ 21) ರಂದು ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ ಶಿವರಾಜ್ ಕುಮಾರ್ ಸಹ ಭಾಗಿಯಾಗಬೇಕಿತ್ತ್ತು, ಆದರೆ ಅವರು ಹೈದರಾಬಾದ್​ನಲ್ಲಿ ಇದ್ದ ಕಾರಣ ಸಭೆಯಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ