ಬೆಂಗಳೂರು, (ಏಪ್ರಿಲ್ 17): ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ (Dwarakish) ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ ಮಾಡಲು ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡ ಅವರು ಮುಂದೆ ಬಂದಿರುವುದಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸ್ವಾಗತಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನ ಶಾಮರಾವ್ ಮತ್ತು ಜಯಮ್ಮ ಅವರ ಪುತ್ರರಾದ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸುವ ಮೂಲಕ ಕಲಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಅಪಾರ ಗೌರವ ಪಡೆದಿರುವುದಲ್ಲದೆ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದವರು. ಜೀವನ ಸಾಗಿಸಲು ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದವರು 1963ರಲ್ಲಿ ಸಿನಿಮಾ ಕಡೆ ಮುಖ ಮಾಡಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಚಲನ ಚಿತ್ರ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಹುಣಸೂರಿನ ಸುಪುತ್ರ ಎನ್ನುವುದರಲ್ಲಿಯೂ ಸೈ ಎನ್ನಿಸಿಕೊಂಡವರು.
ಹಿರಿಯ ನಟ ದ್ವಾರಕೀಶ್ ಅವರು ಚಲನಚಿತ್ರ ಕಲಾ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿ ಅವರ ಹೆಸರಿನಲ್ಲಿ ಹುಣಸೂರಿನ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ (ಕೆ ಯು ಡ ಬ್ಲೂೃ ಜೆ)ಪ್ರಶಸ್ತಿ ಸ್ಥಾಪನೆ ಮಾಡಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ದತ್ತಿನಿಧಿಗೆ ಉದಾರವಾಗಿ ದೇಣಿಗೆ ನೀಡಿರುವ ಶಾಸಕ ಹರೀಶ್‌ಗೌಡ ಅವರನ್ನು ತಗಡೂರು ಅಭಿನಂದಿಸಿದ್ದಾರೆ.
ಸಿನಿಮಾ ರಂಗದ ಬಗ್ಗೆ ವರದಿ ಮಾಡುವ ಕ್ರೀಯಾಶೀಲ ವರದಿಗಾರರೊಬ್ಬರಿಗೆ ಪ್ರತಿ ವರ್ಷ ನಡೆಯುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ