ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಭರಪೂರ ಮನರಂಜನೆಯ ನಿರೀಕ್ಷೆ ಇರುತ್ತದೆ. ಯಾವುದೇ ಚಿತ್ರದಲ್ಲಿ ಕಾಮಿಡಿ ದೃಶ್ಯಗಳಿದ್ದರೆ ಜನರು ಸಖತ್ ಎಂಜಾಯ್ ಮಾಡುತ್ತಾರೆ. ಇಡೀ ಸಿನಿಮಾ ಹಾಸ್ಯಮಯವಾಗಿದ್ದರೆ ಬಂಪರ್ ಮನರಂಜನೆ ಸಿಗುತ್ತದೆ. ಆ ರೀತಿ ಭರವಸೆಯೊಂದಿಗೆ ಮೂಡಿಬರುತ್ತಿದೆ ‘ಧಮಾಕ’ ಸಿನಿಮಾ (Dhamaka Kannada Movie). ಕನ್ನಡದ ಈ ಚಿತ್ರವೀಗ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇಷ್ಟು ದಿನ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರತಂಡ ಈಗ ಟ್ರೇಲರ್ ಅನಾವರಣ ಮಾಡಿ ಕೌತುಕ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ (Shivaraj K R Pete) ಹಾಗೂ ನಯನಾ (Comedy Khiladigalu Nayana) ಜೋಡಿಯಾಗಿ ನಟಿಸಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಕಥೆಯನ್ನು ‘ಧಮಾಕ’ ಸಿನಿಮಾ ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ. ಒಂದಷ್ಟು ಸಸ್ಪೆನ್ಸ್ ಕೂಡ ಇದೆ ಎಂಬುದನ್ನು ತಿಳಿಸಲಾಗಿದೆ. ಹಾಸ್ಯ ನಟ ಚಿಕ್ಕಣ್ಣ ಅವರ ಹಿನ್ನೆಲೆ ಧ್ವನಿಯಲ್ಲಿ ಇದರ ಕಥೆ ನಿರೂಪಿತವಾಗಿರುವುದು ವಿಶೇಷ. ಇಂಥ ಹಲವು ವಿಶೇಷಗಳ ಮೂಲಕ ಜನರನ್ನು ರಂಜಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಲಕ್ಷ್ಮಿ ರಮೇಶ್. ಟ್ರೇಲರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಕಾಮಿಡಿ ವಿಚಾರದಲ್ಲಿ ಶಿವರಾಜ್ ಕೆ.ಆರ್. ಪೇಟೆ ಅವರು ಈಗಾಗಲೇ ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ‘ಧಮಾಕ’ ಚಿತ್ರದಲ್ಲಿ ಹೀರೋ ಆಗಿ ಜನರನ್ನು ನಕ್ಕು ನಗಿಸಲು ಬರುತ್ತಿದ್ದಾರೆ. ತಮ್ಮದೇ ಮ್ಯಾನರಿಸಂ ಮೂಲಕ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿಯಾಗಿ ನಯನಾ ಸಾಥ್ ನೀಡಿದ್ದಾರೆ. ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್, ಸಿದ್ಧು ಮೂಲಿಮನಿ, ಪ್ರಿಯಾ ಜೆ. ಆಚಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಧಮಾಕ’ ಚಿತ್ರವನ್ನು ಎಸ್.ಆರ್. ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ನಡಿ ಸುನೀಲ್ ಎಸ್. ರಾಜ್ ಮತ್ತು ಅನ್ನಪೂರ್ಣ ಪಾಟೀಲ ನಿರ್ಮಾಣ ಮಾಡಿದ್ದಾರೆ. ಹಾಲೇಶ್ ಎಸ್. ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ, ರಘು ಆರ್.ಜೆ. ನೃತ್ಯ ನಿರ್ದೇಶನ ಹಾಗೂ ವಿನಯ್ ಕೂರ್ಗ್ ಅವರ ಸಂಕಲನ ಈ ಸಿನಿಮಾಗಿದೆ. ಸಿನಿಮಾ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:47 pm, Sun, 21 August 22