SIIMA Awards: ಮೊದಲ ಬಾರಿ ಬೆಂಗಳೂರಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ; ಪುನೀತ್ಗೆ ವಿಶೇಷ ಗೌರವಾರ್ಪಣೆ
10ನೇ ವರ್ಷದ ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಬೆಂಗಳೂರಿನಲ್ಲಿ ಈ ಸಮಾರಂಭ ಜರುಗಲಿದೆ.
ಕಳೆದ 10 ವರ್ಷಗಳಿಂದ ಸೈಮಾ ಪ್ರಶಸ್ತಿ ಪ್ರದಾನ (SIIMA Awards) ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತ ಮತ್ತು ವಿದೇಶದ ಬೇರೆ ಬೇರೆ ನಗರಗಳಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ ಎಂಬುದು ವಿಶೇಷ. 2022ನೇ ಸಾಲಿನ ಸಮಾರಂಭವು ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ನಡೆಯಲಿದೆ. ಅದಕ್ಕಾಗಿ ಸೆಪ್ಟೆಂಬರ್ 10 ಮತ್ತು 11ರಂದು ದಿನಾಂಕ ನಿಗದಿ ಆಗಿದೆ. ಈ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಸೈಮಾ ಅವಾರ್ಡ್ಸ್ ಮುಖ್ಯಸ್ಥೆ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್ (Daali Dhananjay), ರಾಣಾ ದಗ್ಗುಬಾಟಿ, ನಟಿಯರಾದ ಶ್ರೀಲೀಲಾ, ಫಾರಿಯಾ ಅಬ್ದುಲ್ಲಾ, ಶಾನ್ವಿ ಶ್ರೀವಾಸ್ತವ್ ಮುಂತಾದವರು ಭಾಗಿ ಆಗಿದ್ದರು.
‘ಬೆಂಗಳೂರಲ್ಲಿ ‘ಸೈಮಾ’ ಅವಾರ್ಡ್ಸ್ ನಡೆಸಲು 2 ಪ್ರಮುಖ ಕಾರಣಗಳಿವೆ. ಒಂದು, ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ. ಮತ್ತೊಂದು, ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯವಾಗುತ್ತಿವುದು. ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ ಬೃಂದಾ ಪ್ರಸಾದ್.
‘ನನಗೆ ಸೈಮಾ ಎಂದರೆ ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾಗೆ ಹೋದ ನೆನಪು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಈ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ’ ಎಂದು ಧನಂಜಯ್ ಶುಭ ಹಾರೈಸಿದ್ದಾರೆ.
‘ಹತ್ತು ವರ್ಷಗಳ ಕಾಲ ಒಂದು ಪ್ರಶಸ್ತಿ ಸಮಾರಂಭವನ್ನು ನಡೆಸುವುದು ಸುಲಭವಲ್ಲ. ಆ ಸಾಧನೆಗಾಗಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ. ಈ ಬಾರಿ 10ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನನ್ನ ಇಷ್ಟದ ಬೆಂಗಳೂರಿನಲ್ಲಿ ನಡೆಸುತ್ತಿರುವುದು ಸಂತಸದ ವಿಷಯ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೈಮಾ ಜೊತೆಗಿನ ತಮ್ಮ ಅನುಭವ ಮತ್ತು ನೆನಪುಗಳನ್ನು ಶಾನ್ವಿ ಶ್ರೀವಾಸ್ತವ್, ಶ್ರೀಲೀಲಾ ಹಾಗೂ ಫಾರಿಯಾ ಅಬ್ದುಲ್ಲಾ ಹಂಚಿಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:54 pm, Sun, 21 August 22