Dollu Movie: ‘ಡೊಳ್ಳು’ ಚಿತ್ರ ವೀಕ್ಷಿಸಲು ರಾಜ್ಯಪಾಲರಿಗೆ ವಿಶೇಷ ಆಹ್ವಾನ ನೀಡಿದ ಚಿತ್ರತಂಡ
Thawar Chand Gehlot: ‘ಡೊಳ್ಳು’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯಪಾಲರು ಸಿನಿಮಾ ನೋಡುವ ಭರವಸೆ ನೀಡಿದ್ದಾರೆ. ಇದರಿಂದ ಚಿತ್ರತಂಡದ ಖುಷಿ ಹೆಚ್ಚಿದೆ.
ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರು ನಿರ್ಮಿಸಿರುವ ಕನ್ನಡದ ‘ಡೊಳ್ಳು’ ಸಿನಿಮಾ (Dollu Movie) ಈಗ ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ 26ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕರುನಾಡಿನ ಜನಪದ ಕಲೆ ಡೊಳ್ಳು ಮತ್ತು ಅದರ ಮಹತ್ವವನ್ನು ಸಾರುವ ಈ ಸಿನಿಮಾಗೆ ಈವರೆಗೆ 18 ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ದೊರೆತಿದೆ ಎಂಬುದು ವಿಶೇಷ. ಅಲ್ಲದೇ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ (National Award) ಭಾಜನವಾಗಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಇಂತಹ ವಿಭಿನ್ನ ಕಥಾವಸ್ತು ಇರುವ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ. ಈಗ ‘ಡೊಳ್ಳು’ ಚಿತ್ರವನ್ನು ನೋಡುವಂತೆ ನಿರ್ಮಾಪಕ ಪವನ್ ಒಡೆಯರ್ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಆಮಂತ್ರಣ ನೀಡಿದ್ದಾರೆ.
ಈ ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಎಂಬುದು ತಂಡದ ಆಶಯ. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಈ ಸಿನಿಮಾಗೆ ಈಗಾಗಲೇ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ನಟ ಡಾಲಿ ಧನಂಜಯ ಅವರು ಚಿತ್ರದ ಹಾಡು ಬಿಡುಗಡೆ ಮಾಡಿ ಶುಭ ಕೋರಿದ್ದರು. ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಸಿನಿಮಾದ ಬಗ್ಗೆ ಈಗ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯಪಾಲರು ಸಿನಿಮಾ ನೋಡುವ ಭರವಸೆ ನೀಡಿದ್ದಾರೆ. ಇದರಿಂದ ಚಿತ್ರತಂಡದ ಖುಷಿ ಹೆಚ್ಚಿದೆ.
ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ಚೊಚ್ಚಲ ಬಾರಿಗೆ ಪವನ್ ಒಡೆಯರ್ ಅವರು ಪತ್ನಿ ಅಪೇಕ್ಷಾ ಪುರೋಹಿತ್ ಜೊತೆಗೂಡಿ ‘ಡೊಳ್ಳು’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಿರುತೆರೆ ಕಲಾವಿದ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದಾರೆ. ನಿಧಿ ಹೆಗಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ.
‘ಡೊಳ್ಳು’ ಚಿತ್ರಕ್ಕೆ ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೆಲವೇ ದಿನಗಳ ಹಿಂದೆ ನಟ ಡಾಲಿ ಧನಂಜಯ ಅವರು ಬಿಡುಗಡೆ ಮಾಡಿರುವ ‘ಮಾಯಾನಗರಿ..’ ಹಾಡು ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಅದೇ ರೀತಿ ಟ್ರೇಲರ್ ಕೂಡ ಗಮನ ಸೆಳೆಯುತ್ತಿದೆ.
ಪ್ರಶಸ್ತಿ ಪಡೆದ ಸಿನಿಮಾಗಳು ಚಿತ್ರೋತ್ಸವಗಳಿಗಷ್ಟೇ ಸೀಮಿತ ಎಂಬ ಮಾತಿದೆ. ಆದರೆ ಆ ಮಾತು ‘ಡೊಳ್ಳು’ ಚಿತ್ರಕ್ಕೆ ಅನ್ವಯ ಆಗುವುದಿಲ್ಲ. ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.