ರಜನಿಕಾಂತ್ ಅವರು ಬೆಂಗಳೂರು ಮೂಲದವರು. ಅವರು ನಂತರ ತಮಿಳುನಾಡಿಗೆ ಹೋಗಿ ಸೆಟಲ್ ಆದರು. ಈಗ ಕಾಲಿವುಡ್ನಲ್ಲಿ ಅವರು ಸೂಪರ್ಸ್ಟಾರ್. ಅವರಿಗೆ ಅಲ್ಲಿ ಸಾಕಷ್ಟು ಬೇಡಿಕೆ ಇದೆ. ವಯಸ್ಸು 70 ದಾಟಿದರೂ ಅವರು ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ರಜನಿಕಾಂತ್ಗೆ ರಾಜ್ಕುಮಾರ್ ಜೊತೆ ಒಳ್ಳೆಯ ನಂಟಿತ್ತು. ಈಗ ರಜನಿಕಾಂತ್ ಹಾಗೂ ಶಿವರಾಜ್ಕುಮಾರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಈಗಲೂ ಶಿವಣ್ಣ ಚೆನ್ನೈಗೆ ತೆರಳಿದರೆ, ರಜನಿ ಬೆಂಗಳೂರಿಗೆ ಬಂದರೆ ಪರಸ್ಪರ ಭೇಟಿ ಆಗುತ್ತಾರೆ. ಈ ಸಂಬಂಧ ಬಗ್ಗೆ ಶಿವಣ್ಣ ಮಾತನಾಡಿದ್ದರು.
ಶಿವಣ್ಣ ಅವರ ಫೇವರಿಟ್ ಹೀರೋ ಕಮಲ್ ಹಾಸನ್. ಆದರೆ, ಅವರ ಜೊತೆ ಸಿನಿಮಾ ಮಾಡೋ ಅವಕಾಶ ಶಿವರಾಜ್ಕುಮಾರ್ಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ‘ಫಿಲ್ಮ್ ಕಂಪ್ಯಾನಿಯನ್’ಗೆ ನೀಡಿದ ಸಂದರ್ಶನದಲ್ಲಿ ಶಿವರಾಜ್ಕುಮಾರ್ ಮಾತನಾಡಿದ್ದರು. ‘ಕಮಲ್ ಹಾಸನ್ ಜೊತೆ ಸಿನಿಮಾ ಮಾಡೋ ಆಸೆ ಇದೆ. ಅದೇ ರೀತಿ ರಜನಿ ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡ್ತೀನಿ. ನನಗೆ ರಜನಿಕಾಂತ್ ಜೊತೆ ಹತ್ತಿರದ ನಂಟಿದೆ. ಶಬರಿಮಲೆಗೆ ಹೋಗುವಾಗ ಒಟ್ಟಿಗೆ ಹೋಗಿದ್ದೆವು. ಅಪ್ಪಾಜಿ ಜೊತೆ ರಜನಿಕಾಂತ್ ತುಂಬಾನೇ ಸಮಯ ಕಳೆದಿದ್ದರು. ಯಾವಾಗಲೂ ನಾವು ರಜನಿಕಾಂತ್ ಮನೆಗೆ ಊಟಕ್ಕೆ ಹೋಗುತ್ತಿದ್ದೆವು. ವೀರಪ್ಪನ ಘಟನೆ ಆದಾಗ ರಜನಿಕಾಂತ್ ನಮಗೆ ಕಾಲ್ ಮಾಡಿ ಮಾತನಾಡುತ್ತಾ ಇದ್ದರು. ತುಂಬಾನೇ ಮಾರಲ್ ಸಪೋರ್ಟ್ ನೀಡಿದ್ದಾರೆ. ಅವರ ಜೊತೆ ನಟಿಸೋ ಆಫರ್ ಬಂದಾಗ ನೋ ಎನ್ನೋಕೆ ಆಗಿಲ್ಲ’ ಎಂದಿದ್ದರು ಶಿವರಾಜ್ಕುಮಾರ್.
ಕಳೆದ ವರ್ಷ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಅವರು ಮಾಡಿದ ಪಾತ್ರದಿಂದ ಇಡೀ ಸಿನಿಮಾಗೆ ಬೇರೆಯದೇ ಕಳೆ ಬಂದಿತ್ತು. ಶಿವಣ್ಣ ಹಾಗೂ ರಜನಿಕಾಂತ್ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿತ್ತು.
ಇದನ್ನೂ ಓದಿ: ಹೇಗಿರುತ್ತೆ ಶಿವರಾಜ್ಕುಮಾರ್ ದಿನಚರಿ? 62ನೇ ವಯಸ್ಸಿನಲ್ಲೂ ಫಿಟ್ ಆಗಿರೋದರ ಹಿಂದಿನ ಗುಟ್ಟಿದು
ರಜನಿಕಾಂತ್ ಹಾಗೂ ರಾಜ್ಕುಮಾರ್ ಜೊತೆಗಿನ ನಂಟಿನ ಬಗ್ಗೆಯೂ ಶಿವರಾಜ್ಕುಮಾರ್ ಮಾತನಾಡಿದ್ದರು. ‘ಬೆಂಗಳೂರಿಗೆ ಬಂದಾಗ ರಜನಿ ಹಾಗೂ ಅಪ್ಪಾಜಿ ಒಟ್ಟಾಗಿ ವಾಕ್ ಹೋಗುತ್ತಾ ಇದ್ದರು, ಊಟ ಮಾಡುತ್ತಾ ಇದ್ದರು. ರಜನಿ ಅವರು ಅಣ್ಣಾವ್ರ ಫ್ಯಾನ್ ಆಗಿದ್ದರು. ಇಬ್ಬರೂ ಜಾಲಿ ಆಗಿ ಇರುತ್ತಿದ್ದರು’ ಎಂದಿದ್ದರು ಶಿವರಾಜ್ಕುಮಾರ್.
ರಜನಿಕಾಂತ್ ಮಾಜಿ ಅಳಿಯ ಧನುಷ್ ಅವರನ್ನು ಕಂಡರೂ ಶಿವಣ್ಣನಿಗೆ ವಿಶೇಷ ಪ್ರೀತಿ ಇದೆ. ‘ನಾನು ಮೊದಲಿನಿಂದಲೂ ಧನುಷ್ ಅವರನ್ನು ನೊಡುತ್ತಿದ್ದೆ. ಅವರನ್ನು ನೋಡಿದಾಗ ಬ್ರೂಸ್ಲಿ ನೋಡಿದಂತಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ನನ್ನ ನೋಡಿದಂತೆ ಆಗುತ್ತದೆ’ ಎಂದಿದ್ದರು ಶಿವಣ್ಣ. ಶಿವಣ್ಣ ಇತ್ತೀಚೆಗೆ ತಮಿಳು ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿ ಹೋಗಿ ಹೆಸರು ಮಾಡಬೇಕು ಎನ್ನುವ ಆಸೆ ಅವರಿಗೆ ಇಲ್ಲ. ಅಲ್ಲಿ ಒಂದು ಜರ್ನಿ ಮಾಡಬೇಕು ಎಂಬುದಷ್ಟೇ ಅವರ ಆಸೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.