Aparna Obituary: ಕಿರುತೆರೆ ಲೋಕದಲ್ಲಿ ಹೊಸ ಛಾಪು ಮೂಡಿಸಿದ್ದ ಅಪರ್ಣಾ; ಈಡೇರಲಿಲ್ಲ ಕೊನೆಯ ಕನಸು
ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಗುರುವಾರ ರಾತ್ರಿ (ಜುಲೈ 12) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಎಲ್ಲ ಕಡೆಗಳಿಂದ ಸಂತಾಪ ವ್ಯಕ್ತವಾಗಿದೆ. ಅಪರ್ಣಾ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅವರು ಇಹಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಅವರ ಬಣ್ಣದ ಲೋಕದ ಜರ್ನಿ ಬಗ್ಗೆ ಇಲ್ಲಿದೆ ಮಾಹಿತಿ.
ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು.
ಸಿನಿ ಜರ್ನಿ
ಮಸಣದ ಹೂವು (1985), ಸಂಗ್ರಾಮ (1987), ನಮ್ಮೂರ ರಾಜ (1988), ಸಾಹಸ ವೀರ (1988), ಮಾತೃ ವಾತ್ಸಲ್ಯ (1988), ಒಲವಿನ ಆಸರೆ (1989), ಇನ್‌ಸ್ಪೆಕ್ಟರ್ ವಿಕ್ರಮ್ (1989), ಒಂದಾಗಿ ಬಾಳು (1989), ಡಾಕ್ಟರ್ ಕೃಷ್ಣ (1989), ಒಂಟಿ ಸಲಗ (1989), ಚಕ್ರವರ್ತಿ (1990) ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಈ ವರ್ಷ ರಿಲೀಸ್ ಆದ ‘ಗ್ರೇ ಗೇಮ್ಸ್’ ಚಿತ್ರದಲ್ಲಿ.
ನಿರೂಪಣೆ..
2003ರಲ್ಲಿ ಪ್ರಸಾರ ಆರಂಭಿಸಿದ ‘ಮೂಡಲ ಮನೆ’ ಧಾರಾವಾಹಿಯಲ್ಲಿ ಅಪರ್ಣಾ ಬಣ್ಣ ಹಚ್ಚಿದರು. ಆ ಬಳಿಕ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆಯನ್ನು ಅವರು ಮಾಡಿದರು. ಕಿರುತೆರೆಯ ಬೇಡಿಕೆಯ ನಿರೂಪಕಿ ಆಗಿದ್ದರು. ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮ ಒಂದರಲ್ಲಿ ಸತತ ಎಂಟು ಗಂಟೆ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
ಅಪರ್ಣಾ ಅವರು ಬಿಗ್ ಬಾಸ್ಗೂ ಕಾಲಿಟ್ಟಿದ್ದರು. 2013ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಅವರು ಸ್ಪರ್ಧೆಯಾಗಿದ್ದರು. ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಮೂಡಿ ಬಂದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ನಮ್ಮ ಮೆಟ್ರೋದಲ್ಲಿ ಬರುವ ‘ಮುಂದಿನ ನಿಲ್ದಾಣ..’ ಎನ್ನುವ ಧ್ವನಿ ಅಪರ್ಣಾ ಅವರದ್ದೇ.
ಇದನ್ನೂ ಓದಿ: ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ; ಕ್ಯಾನ್ಸರ್ನಿಂದ ನಿಧನ
ಮಜಾ ಟಾಕೀಸ್ ಬಿಡುವ ಆಲೋಚನೆ
‘ಮಜಾ ಟಾಕೀಸ್’ ಕಾರ್ಯಕ್ರಮ ಬಿಡಲು ಅಪರ್ಣಾ ಮುಂದಾಗಿದ್ದರು. ತಮ್ಮ ಪಾತ್ರ ಟ್ರೋಲ್ ಆಗುತ್ತಿದೆ ಎಂದು ಅವರಿಗೆ ಅನಿಸಿತ್ತು. ಈ ಕಾರಣದಿಂದಲೇ ಅವರು ಕಾರ್ಯಕ್ರಮ ತೊರೆಯಲು ನಿರ್ಧರಿಸಿದ್ದರು. ಆ ಬಳಿಕ ಸೃಜನ್ ಲೋಕೇಶ್ ಅವರು ಮನ ಒಲಿಸಿ ಅವರನ್ನು ಉಳಿಸಿಕೊಂಡಿದ್ದರು. 2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಅಪರ್ಣಾ ಸ್ವೀಕರಿಸಿದ್ದರು.
ಕ್ಯಾನ್ಸರ್
ಅಪರ್ಣಾ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿತ್ತು. ಕಳೆದ ಎರಡು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಇದ್ದರು. ಕ್ಯಾನ್ಸರ್ ನಾಲ್ಕನೇ ಸ್ಟೇಜ್ನಲ್ಲಿ ಇತ್ತು. ಕಿಮೋ ಥೆರೆಪಿ ಕೂಡ ಮಾಡಿಸಿದ್ದರು. ಇದೆ ಅಕ್ಟೋಬರ್ಗೆ ಅಪರ್ಣಾಗೆ 58 ವರ್ಷ ಆಗುತ್ತಿತ್ತು.
ಈಡೇರಲಿಲ್ಲ ಕೊನೆಯ ಆಸೆ
ಅಪರ್ಣಾ ಅವರು ಒಂದು ಕನಸು ಕಂಡಿದ್ದರು. ಈ ಕನಸು ಈಡೇರಲಿಲ್ಲ. ಅಪರ್ಣಾಗೆ ನಿರೂಪಣಾ ಶಾಲೆಯೊಂದನ್ನ ತೆರೆಯೋ ಗುರಿಯಿತ್ತು. ತಮ್ಮ ಗೆಳೆಯರ ಬಳಿ ಈ ಆಸೆಯನ್ನು ಅವರು ಹಂಚಿಕೊಂಡಿದ್ದರು. ಆದರೆ, ಈ ಆಸೆ ಈಡೇರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:13 am, Fri, 12 July 24