‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಹೇಮಂತ್ ಎಂ. ರಾವ್ ಅವರು ಈಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಹೀರೋ. ಈ ಚಿತ್ರಕ್ಕೆ ‘ಭೈರವನ ಕೊನೆ ಪಾಠ’ ಎಂಬ ಡಿಫರೆಂಟ್ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ‘ಇದು ತಲೆಮಾರುಗಳ ತನಕ ನೆನಪಿನಲ್ಲಿ ಉಳಿಯುವಂತಹ ಸಿನಿಮಾ ಆಗಲಿದೆ’ ಎಂದು ನಿರ್ಮಾಪಕ ವೈಶಾಖ್ ಜೆ. ಗೌಡ ಹೇಳಿದ್ದಾರೆ. ‘ವಿಜೆಎಫ್ ಪ್ರೊಡಕ್ಷನ್ ಹೌಸ್’ ಮೂಲಕ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಡಿಫರೆಂಟ್ ಟೈಟಲ್ಗಳ ಮೂಲಕ ನಿರ್ದೇಶಕ ಹೇಮಂತ್ ಎಂ. ರಾವ್ ಅವರು ಯಾವಾಗಲೂ ಅಚ್ಚರಿ ಮೂಡಿಸುತ್ತಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಆಡುಭಾಷೆಗೆ ಹತ್ತಿರವಾದ ಟೈಟಲ್ಗಳು ನನಗೆ ಇಷ್ಟ. ನಾನು ನಿರ್ದೇಶಿಸಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೈಟಲ್ಗಳು ಜನರಿಗೆ ಇಷ್ಟ ಆಗಿದ್ದವು. ‘ಭೈರವನ ಕೊನೆ ಪಾಠ’ ಸಹ ಅದೇ ಸಾಲಿಗೆ ಸೇರಲಿದೆ ಎಂಬ ಭರವಸೆ ಇದೆ. ಕನ್ನಡ ಚಿತ್ರರಂಗದ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರಿನ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ನಮ್ಮದಾಗಿದೆ’ ಎಂದು ಹೇಮಂತ್ ಎಂ. ರಾವ್ ಹೇಳಿದ್ದಾರೆ.
ಇದನ್ನೂ ಓದಿ: ‘ಹಣೆಬರಹ, ಏನೂ ಮಾಡೋಕೆ ಆಗಲ್ಲ’: ದರ್ಶನ್ ಕೇಸ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
‘ಈ ಸಿನಿಮಾದಲ್ಲಿ ಭೈರವನದ್ದೇ ಕೇಂದ್ರ ಪಾತ್ರ. ಹಾಗಾಗಿ ಈ ಶೀರ್ಷಿಕೆ ತುಂಬ ಅಚ್ಚುಕಟ್ಟಾಗಿ ಹೊಂದುತ್ತದೆ. ಭೈರವ ಮಾಡುವ ಪಾಠ ಏನು? ಅದನ್ನು ಕೊನೆ ಪಾಠ ಎಂದು ಹೇಳಿರುವುದು ಯಾಕೆ ಎಂಬುದೇ ಈ ಕಥೆಯ ತಿರುಳು. ವೀಕ್ಷಕರಲ್ಲಿ ಈ ಶೀರ್ಷಿಕೆಯು ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿ ಆಗುತ್ತದೆ ಎಂಬ ನಂಬಿಕೆ ನಮಗಿದೆ’ ಎಂದಿದ್ದಾರೆ ಹೇಮಂತ್ ಎಂ. ರಾವ್.
The Most Important Lesson Is The One Yet To Be Taught. #BhairavanaKonePaaTa #BKP #VaishakJFilms #Shivarajkumar pic.twitter.com/4aGRj2M1Bp
— Hemanth M Rao (@hemanthrao11) July 4, 2024
ಟೈಟಲ್ ಪೋಸ್ಟರ್ನಲ್ಲಿ ಕಾಣಿಸಿರುವ ಬಾಣ, ಹೂವು, ಬೆಟ್ಟ ಇತ್ಯಾದಿಗಳು ಕೌತುಕ ಮೂಡಿಸಿವೆ. ಅವುಗಳ ಬಗ್ಗೆ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಇನ್ನಷ್ಟು ಮಾಹಿತಿ ಸಿಗಲಿವೆ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗುವ ಸಾಧ್ಯತೆ ಇದೆ. ವೈಶಾಖ್ ಜೆ. ಗೌಡ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದು. ಶೀರ್ಷಿಕೆಗೆ ಜನರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಅವರಿಗೆ ಖುಷಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.