ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವಲ್ಲಿ ಶಿವರಾಜ್ಕುಮಾರ್ ಫೇಮಸ್. ‘ಹ್ಯಾಟ್ರಿಕ್ ಹೀರೋ’ ಎನರ್ಜಿಯೇ ಅಂಥದ್ದು. ಸದ್ಯಕ್ಕೆ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ. ಅದರ ನಡುವೆಯೇ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಶಿವರಾಜ್ಕುಮಾರ್ ನಟಿಸಲಿರುವ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ‘ಎಂಬಿ’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ, ಶಿವಣ್ಣ ಜೊತೆ ಸಿನಿಮಾ ಮಾಡಲು ಮುಂಬೈನ ನಿರ್ಮಾಣ ಸಂಸ್ಥೆ ಮುಂದೆ ಬಂದಿದೆ.
ಮುಂಬೈ ಮೂಲದ ‘ADD-ONE ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಎಂಬಿ’ ಸಿನಿಮಾ ನಿರ್ಮಾಣ ಆಗಲಿದೆ. ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಜಯಕಾಂತ್ ನಟನೆಯ ಯಶಸ್ವಿ ‘ವಲ್ಲರಸು’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದ ಎನ್. ಮಹಾರಾಜನ್ ಅವರು ಈಗ ‘ಎಂಬಿ’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.
ಇಲ್ಲಿಯವರೆಗೆ 3 ತಮಿಳು ಮತ್ತು ಸನ್ನಿ ಡಿಯೋಲ್ ನಟನೆಯ ಹಿಂದಿ ಸಿನಿಮಾವೊಂದನ್ನು ನಿರ್ದೇಶನ ಮಾಡಿರುವ ಮಹಾರಾಜನ್ ಅವರು ‘ಎಂಬಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ADD-ONE ಫಿಲ್ಮ್ಸ್’ ಸಂಸ್ಥೆಯ ವತಿಯಿಂದ ಅನೇಕ ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವ ಮನೋಜ್ ಬನೋಡೆ ಮತ್ತು ಖೇಮ್ ಚಂದ್ ಖಡ್ಗಿ ಅವರು ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ಗೆ ಹಾರೈಸಲು ತಮಿಳುನಾಡಿನಿಂದ ಬಂದ ಫ್ಯಾನ್ಸ್
ಮನೋಜ್ ಬನೋಡೆ, ಖೇಮ್ ಚಂದ್ ಖಡ್ಗಿ ಅವರು ತಮ್ಮ ಮೊದಲ ಸಿನಿಮಾವನ್ನು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಅಷ್ಟಕ್ಕೂ ‘MB’ ಎಂದರೆ ಏನು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಶೀರ್ಷಿಕೆಯ ವಿವರಣೆ ಮತ್ತು ಚಿತ್ರತಂಡದ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. 2025ರ ಮಧ್ಯದಲ್ಲಿ ‘MB’ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.