ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ಗೆ ಮತ್ತೊಂದು ಬಿಗ್ ರಿಲೀಫ್; ಮೈಸೂರಿಗೆ ಪ್ರಯಾಣ
ಕೊಲೆ ಆರೋಪಿ ದರ್ಶನ್ ಅವರಿಗೆ ಇತ್ತೀಚೆಗೆ ಜಾಮೀನು ಸಿಕ್ಕಿತ್ತು. ಈಗ ಅದರ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದ ದರ್ಶನ್ ಅವರಿಗೆ ಸಾಕಷ್ಟು ಅನುಕೂಲ ಆಗಲಿದೆ. ಮೂರು ಮುಖ್ಯವಾದ ಕಾರಣಗಳನ್ನು ನೀಡಿದ ದರ್ಶನ್ ಈ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ದರ್ಶನ್ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಬದುಕಿಗೆ ಸಾಕಷ್ಟು ಅಡೆತಡೆಗಳು ಆಗಿವೆ. ಇತ್ತೀಚೆಗೆ ಜಾಮೀನು ಸಿಕ್ಕಿದ್ದರಿಂದ ಅವರು ಕೊಂಚ ನಿಟ್ಟುಸಿರು ಬಿಟ್ಟರು. ಈಗ ಅವರಿಗೆ ನ್ಯಾಯಾಲಯದಿಂದ ಇನ್ನೊಂದು ಬಿಗ್ ರಿಲೀಫ್ ಸಿಕ್ಕಿದೆ. ಸದ್ಯ ಬೆಂಗಳೂರಿನಲ್ಲಿ ಇರುವ ದರ್ಶನ್ ಅವರು ಕೆಲವು ದಿನಗಳ ಮಟ್ಟಿಗೆ ಮೈಸೂರಿಗೆ ತೆರಳಲು ಅನುಮತಿ ನೀಡಲಾಗಿದೆ. ಮೂರು ಪ್ರಮುಖ ಕಾರಣಗಳನ್ನು ನೀಡಿ ದರ್ಶನ್ ಅವರು ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಅಂಗೀಕರಿಸಿದೆ. ಹಾಗಾಗಿ ಮೈಸೂರಿಗೆ ತೆರಳಲು ದರ್ಶನ್ಗೆ ಅನುಮತಿ ಕೊಡಲಾಗಿದೆ.
ಡಿಸೆಂಬರ್ 20ರಿಂದ ಜನವರಿ 5ರವರೆಗೆ ಮೈಸೂರಿನಲ್ಲಿ ಇರಲು ದರ್ಶನ್ ಅವರಿಗೆ ಅನುಮತಿ ನೀಡಲಾಗಿದೆ. ದರ್ಶನ್ ಬಂಧನ ಆಗಿದ್ದು ಕೂಡ ಮೈಸೂರಿನಲ್ಲಿ. ಈಗ 6 ತಿಂಗಳ ಬಳಿಕ ಅವರಿಗೆ ಮೈಸೂರಿಗೆ ತೆರಳುವ ಅವಕಾಶ ದೊರೆತಿದೆ. ಮೈಸೂರಿನ ಜೊತೆಗೆ ದರ್ಶನ್ ಅವರಿಗೆ ವಿಶೇಷ ನಂಟು ಇದೆ. ಶೂಟಿಂಗ್ ಇಲ್ಲದೇ ಇರುವಾಗ ಅವರು ಹೆಚ್ಚು ಸಮಯವನ್ನು ಮೈಸೂರಿನಲ್ಲಿ ಕಳೆಯುತ್ತಾರೆ. ಆದರೆ ಕೇಸ್ ಕಾರಣದಿಂದ ಇಷ್ಟು ದಿನ ಅಲ್ಲಿಗೆ ತೆರಳಲು ಸಾಧ್ಯವಾಗಿರಲಿಲ್ಲ.
ಮೈಸೂರಿನಲ್ಲಿರುವ 76 ವರ್ಷದ ತಾಯಿಯನ್ನು ಭೇಟಿ ಮಾಡುವ ಉದ್ದೇಶ ಇದೆ. ಟಿ. ನರಸೀಪುರ ರಸ್ತೆ ಬಳಿಯ ಫಾರ್ಮ್‌ಹೌಸ್‌ಗೆ ತೆರಳುವ ಉದ್ದೇಶ ಕೂಡ ಇದೆ. ಅಲ್ಲದೇ, ಫಾರ್ಮ್‌ನಲ್ಲಿ ಹಲವು ಪ್ರಾಣಿಗಳನ್ನು ಸಾಕಿರುವುದರಿಂದ ಭೇಟಿಗೆ ಅನುಮತಿ ಕೋರಲಾಗಿತ್ತು. ಇದರ ಜೊತೆಗೆ ಬೆನ್ನುಹುರಿಯ ನೋವಿಗೆ ಅಪೋಲೋ ಆಸ್ಪತ್ರೆ ವೈದ್ಯರ ಅಭಿಪ್ರಾಯ ಪಡೆಯಲು ಕೂಡ ಮೈಸೂರಿಗೆ ತೆರಳಬೇಕಿದೆ ಎಂದು ದರ್ಶನ್ ಅರ್ಜಿಯಲ್ಲಿ ಕಾರಣಗಳನ್ನು ನೀಡಿದ್ದರು.
ಇದನ್ನೂ ಓದಿ: ದರ್ಶನ್ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಹೇಗಿದೆ ನೋಡಿ ಪೊಲೀಸರ ಸಿದ್ಧತೆ
ಈ ಮೊದಲು ಮೈಸೂರಿನಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಅಭಿಪ್ರಾಯನ್ನು ಪಡೆಯುವ ಉದ್ದೇಶವಿದೆ ಎಂದು ಕಾರಣವನ್ನು ನೀಡಿ ದರ್ಶನ್ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಕಾರಣಗಳನ್ನು ಪರಿಗಣಿಸಿ ಕೋರ್ಟ್ ಅನುಮತಿ ನೀಡಿದೆ. ಸಿಸಿಹೆಚ್ 57ನೇ ನ್ಯಾಯಾಲಯದ ಜಡ್ಜ್ ಜೈಶಂಕರ್ ಅವರ ಆದೇಶ ನೀಡಿದ್ದಾರೆ. ತೀವ್ರ ಬೆನ್ನು ನೋವು ಇದ್ದರೂ ಕೂಡ ದರ್ಶನ್ ಅವರನ್ನು ಕೆಂಗೇರಿಯ ಖಾಸಗಿ ಆಸ್ಪತ್ರೆಯಿಂದ ಇತ್ತೀಚೆಗೆ ಡಿಸ್ಚಾರ್ಜ್ ಮಾಡಲಾಯಿತು. ಈವರೆಗೂ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.