‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

| Updated By: ಮದನ್​ ಕುಮಾರ್​

Updated on: Feb 27, 2022 | 9:33 AM

‘ಪುನೀತ್​ ರಾಜ್​ಕುಮಾರ್​ ಅವರಿಗೆ ಬೇರೆ ಯಾರ ವಾಯ್ಸ್​ ಕೂಡ ಸರಿ ಎನಿಸಲಿಲ್ಲ. ಆದರೆ ಶಿವರಾಜ್​ಕುಮಾರ್​ ಧ್ವನಿ​ ನೀಡಿದ ಬಳಿಕ ಎಲ್ಲ ದೃಶ್ಯಗಳ ಮೆರುಗು ಹೆಚ್ಚಿದೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​
ಚೇತನ್​ ಕುಮಾರ್​, ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​
Follow us on

ಬಹುನಿರೀಕ್ಷಿತ ‘ಜೇಮ್ಸ್​’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆಯ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್​’ (James Kannada Movie) ಬಿಡುಗಡೆ ಆಗಲಿದೆ. ಈ ಸಿನಿಮಾದ ಡಬ್ಬಿಂಗ್​ ಕೆಲಸಗಳು ಬಾಕಿ ಇರುವಾಗಲೇ ಅಪ್ಪು ಅವರು ಹೃದಯಾಘಾತದಿಂದ ನಿಧನರಾದರು. ಬಳಿಕ ಅವರ ಪಾತ್ರಕ್ಕೆ ಧ್ವನಿ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆಗ ಕೇಳಿಬಂದಿದ್ದೇ ಶಿವರಾಜ್​ಕುಮಾರ್​ (Shivarajkumar) ಹೆಸರು. ಹೌದು, ತಮ್ಮನ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ಎಲ್ಲರಿಂದಲೂ ವ್ಯಕ್ತವಾಯ್ತು. ಅದಕ್ಕೆ ಶಿವರಾಜ್​ಕುಮಾರ್​ ಕೂಡ ಸಮ್ಮತಿ ಸೂಚಿಸಿದರು. ಡಬ್ಬಿಂಗ್​ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ಪಾತ್ರಕ್ಕೆ ಶಿವರಾಜ್​ಕುಮಾರ್​ ಅವರು ಡಬ್ಬಿಂಗ್​ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ನಿರ್ದೇಶಕ ಚೇತನ್​ ಕುಮಾರ್​ ಅವರು ವಿವರಿಸಿದ್ದಾರೆ. ಎಮೋಷನಲ್​ ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ಬಳಿಕ ದೊಡ್ಮನೆಗೆ ಆದ ನೋವು ಎಷ್ಟು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆ ನೋವಿನ ನಡುವೆಯೂ ಜೀವನ ಮುಂದುವರಿಯಲೇ ಬೇಕು. ನೋವು ನುಂಗಿಕೊಂಡು ಶಿವಣ್ಣ ‘ಜೇಮ್ಸ್​’ ಚಿತ್ರಕ್ಕೆ ಡಬ್ಬಿಂಗ್​ ಮಾಡಿಕೊಟ್ಟರು. ‘ಶಿವಣ್ಣ ಅವರದ್ದು ಯಾವಾಗಲೂ ಡಬಲ್​ ಗುಂಡಿಗೆ ಎನ್ನಬಹುದು. ಅವರಿಗೆ ಹ್ಯಾಟ್ಸಾಫ್​ ಹೇಳಲೇಬೇಕು. ಯಾಕೆಂದರೆ, ಇದು ತುಂಬ ಎಮೋಷನಲ್​ ಆದ ಕೆಲಸ. ಅಣ್ಣನಾಗಿ ತಮ್ಮನ ಸಿನಿಮಾಗೆ ಡಬ್​ ಮಾಡುವುದು ಅಷ್ಟು ಸುಲಭ ಅಲ್ಲ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

‘ಡಬ್ಬಿಂಗ್​ ಎಂಬುದೇ ಕಠಿಣವಾದ ಕೆಲಸ. ಅಪ್ಪು ಸರ್​ ನಟನೆ ಮಾಡಿದ್ದನ್ನು ನೋಡಿಕೊಂಡು ಶಿವಣ್ಣ ಡಬ್ಬಿಂಗ್​ ಸಮಯದಲ್ಲಿ ಮತ್ತೆ ಆ್ಯಕ್ಟ್​ ಮಾಡಬೇಕು. ಅಂಥ ಎಷ್ಟೋ ಸಂದರ್ಭದಲ್ಲಿ ಶಿವಣ್ಣ ಭಾವುಕರಾದರು. ಬಳಿಕ ಆ ಎಮೋಷನ್​ಗಳನ್ನು ಕಂಟ್ರೋಲ್​ ಮಾಡಿಕೊಂಡು ಅದ್ಭುತವಾಗಿ ಡಬ್ಬಿಂಗ್​ ಮಾಡಿಕೊಟ್ಟಿದ್ದಾರೆ. ಒಬ್ಬ ನಿರ್ದೇಶಕನಾಗಿ ನನಗೆ ಬಹಳ ತೃಪ್ತಿ ಇದೆ. ಯಾಕೆಂದರೆ ಬೇರೆ ಯಾವ ವಾಯ್ಸ್​ ಕೂಡ ನಮಗೆ ಅಷ್ಟು ಸರಿ ಎನಿಸಲಿಲ್ಲ. ಬೇರೆ ವಾಯ್ಸ್​ ಇದ್ದಾಗ, ಅಪ್ಪು ಸರ್​ ಅಷ್ಟು ಚೆನ್ನಾಗಿ ನಟಿಸಿದ ದೃಶ್ಯಗಳು ಬಿದ್ದು ಹೋಗುತ್ತಿವೆ ಅಂತ ನನಗೆ ಅನಿಸುತ್ತಿತ್ತು. ಆದರೆ ಶಿವಣ್ಣ ವಾಯ್ಸ್​ ನೀಡಿದ ಬಳಿಕ ಆ ಎಲ್ಲ ದೃಶ್ಯಗಳ ಮೆರುಗು ಹೆಚ್ಚಿದೆ. ಅದಕ್ಕಾಗಿ ಶಿವಣ್ಣ ಅವರಿಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ ಚೇತನ್​ ಕುಮಾರ್​.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

‘ಜೇಮ್ಸ್​’ ಸಿನಿಮಾ ಬಗ್ಗೆ ಹರಡಿದೆ ಹಲವು ಗಾಸಿಪ್​; ಎಲ್ಲದಕ್ಕೂ ನಿರ್ಮಾಪಕರಿಂದಲೇ ಬಂತು ಸೂಕ್ತ ಸ್ಪಷ್ಟನೆ