ಚಿತ್ರರಂಗದ ಗಣ್ಯರಿಂದ ಸೌಂದರ್ಯ ಜಗದೀಶ್​ ಅಂತಿಮ ದರ್ಶನ; ಏ.15ಕ್ಕೆ ಅಂತ್ಯಕ್ರಿಯೆ

|

Updated on: Apr 14, 2024 | 6:30 PM

ಸೌಂದರ್ಯ ಜಗದೀಶ್​ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕುಟುಂಬದವರು ಮಹಾಲಕ್ಷ್ಮೀ ಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ (ಏಪ್ರಿಲ್​ 15) ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಅವರ ನಿವಾಸಕ್ಕೆ ಆಗಮಿಸಿದ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ.

ಚಿತ್ರರಂಗದ ಗಣ್ಯರಿಂದ ಸೌಂದರ್ಯ ಜಗದೀಶ್​ ಅಂತಿಮ ದರ್ಶನ; ಏ.15ಕ್ಕೆ ಅಂತ್ಯಕ್ರಿಯೆ
ಸೌಂದರ್ಯ ಜಗದೀಶ್​
Follow us on

ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ ನಿರ್ಮಾಪಕ ಸೌಂದರ್ಯ ಜಗದೀಶ್​ (Soundarya Jagadeesh) ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಇಂದು (ಏಪ್ರಿಲ್​ 14) ಬೆಳಗ್ಗೆ ಜಗದೀಶ್​ ಅವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು. ಬಳಿಕ ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಮಧ್ಯಾಹ್ನದ ವೇಳೆಗೆ ಸೌಂದರ್ಯ ಜಗದೀಶ್​ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬರಲಾಗಿದೆ. ನಟ ದರ್ಶನ್​ (Darshan) ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ.

ಸೋಮವಾರ (ಏಪ್ರಿಲ್​ 15) ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಸೌಂದರ್ಯ ಜಗದೀಶ್​ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೌಂದರ್ಯ ಜಗದೀಶ್​ ಅವರ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ.

ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್​ ಅವರು ನಂತರ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದ ಹಲವರ ಜೊತೆ ಅವರು ಒಡನಾಟ ಹೊಂದಿದ್ದರು. ಇಂದು ಶ್ರೀಮುರಳಿ, ದರ್ಶನ್​, ಉಪೇಂದ್ರ, ಗುರುಕಿರಣ್​, ತರುಣ್​ ಸುಧೀರ್​, ಸಾರಾ ಗೋವಿಂದು, ಕೆ. ಮಂಜು ಮುಂತಾದವರು ಬಂದು ಸೌಂದರ್ಯ ಜಗದೀಶ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಜಗದೀಶ್​ ಪುತ್ರ ಸ್ನೇಹಿತ್​ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ಅಪ್ಪನ ಶವದ ಎದುರು ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ: ಸೌಂದರ್ಯ ಜಗದೀಶ್​ ಸಾವಿನ ಹಿಂದಿರುವ 2 ಅನುಮಾನದ ಬಗ್ಗೆ ಸ್ನೇಹಿತರ ಸ್ಪಷ್ಟನೆ

ಸೌಂದರ್ಯ ಜಗದೀಶ್​ ಅವರ ಸಾವಿಗೆ ಸಂಬಂಧಿಸಿದಂತೆ ಕುಟುಂಬದವರು ಮಹಾಲಕ್ಷ್ಮೀ ಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಗದೀಶ್​ ಅವರು ಆರ್ಥಿಕ ಸಂಕಷ್ಟ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಹೆಚ್ಚು ಸಾಲ ಆಗಿತ್ತು. ಮರು ಪಾವತಿ ಮಾಡಲಾಗದೇ ನೊಂದಿದ್ದರು. ಕಳೆದ ತಿಂಗಳು ಸೌಂದರ್ಯ ಜಗದೀಶ್​ ಅವರ ಅತ್ತೆ ನಿಧನರಾಗಿದ್ದರು. ಆ ಬಳಿಕ ಜಗದೀಶ್​ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ಕುಟುಂಬದವರು ಕೌನ್ಸಲಿಂಗ್​ ಮಾಡಿಸಿದ್ದರು. ಡಿಪ್ರೆಷನ್​ಗೆ ಜಗದೀಶ್​ ಅವರು ಔಷಧಿ ಸೇವಿಸುತ್ತಿದ್ದರು. ಕಳೆದು ಒಂದು ತಿಂಗಳಿಂದ ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದರು ಎಂಬುದು ತಿಳಿದು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.