ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಬಿಸ್ನೆಸ್ ಪಾರ್ಟ್ನರ್ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ವಿರುದ್ಧ ಆರೋಪ ಕೇಳಿಬಂದಿತ್ತು. ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಜಗದೀಶ್ ಕುಟುಂಬದವರು ದೂರು ನೀಡಿದ್ದರು. ಆದರೆ ಈಗ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ವಿರುದ್ಧದ ಕೇಸ್ ರದ್ದಾಗಿದೆ.
ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಸಿಕ್ಕ ಪತ್ರವನ್ನು ಆಧರಿಸಿ ಕೇಸ್ ದಾಖಲು ಮಾಡಲಾಗಿತ್ತು. ಆತ್ಮಹತ್ಯೆ ಪತ್ರದಲ್ಲಿ ಪ್ರಚೋದನೆ ಬಗ್ಗೆ ಆರೋಪವಿಲ್ಲ. ಹಾಗಾಗಿ ಕೇಸ್ ರದ್ದುಪಡಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ. ‘ಆದೇಶದಲ್ಲಿನ ಅಭಿಪ್ರಾಯಗಳು ಇವರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ’ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
‘ಜಗದೀಶ್ ಅವರ ಫ್ಯಾಮಿಲಿ ಪ್ರಾಬ್ಲಂನಿಂದ ಏನು ಸಮಸ್ಯೆ ಆಗಿತ್ತೋ ನಮಗೆ ಗೊತ್ತಿಲ್ಲ. ಮೇ 11ರಂದು ಅವರ ಪತ್ನಿ ರೇಖಾ ನಮ್ಮನ್ನು ಹೋಟೇಲ್ಗೆ ಕರೆದರು. ತಮಗೆ 10 ಕೋಟಿ ರೂಪಾಯಿ ಕೊಡಬೇಕು ಎಂದರು. ನಾವು ಕೊಡೋಕೆ ಆಗಲ್ಲ ಅಂದಿದ್ವಿ. ನಮಗೂ ಜಗದೀಶ್ ಸಾವಿಗೂ ಯಾವ ಸಂಬಂಧ ಇಲ್ಲ. ಮೇ 22 ನಮ್ಮ ಮೇಲೆ ಎಫ್ಐಆರ್ ಮಾಡಿದರು. ಆದರೆ ಹೈಕೋರ್ಟ್ನಲ್ಲಿ ಇವತ್ತು ಕೇಸ್ ಕ್ವಾಶ್ ಆಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ
ಏಪ್ರಿಲ್ 14ರಂದು ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ‘ಸ್ನೇಹಿತರು’, ‘ಅಪ್ಪು ಪಪ್ಪು’ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದ್ದ ಅವರು ಹಲವು ಸೆಲೆಬ್ರಿಟಿಗಳ ಜೊತೆ ಆಪ್ತ ಒಡನಾಟ ಹೊಂದಿದ್ದರು. ದರ್ಶನ್, ಉಪೇಂದ್ರ ಮುಂತಾದ ನಟರಿಗೆ ಸೌಂದರ್ಯಾ ಜಗದೀಶ್ ಆಪ್ತರಾಗಿದ್ದರು. ಬೆಂಗಳೂರಿನಲ್ಲಿ ಜೆಟ್ಲಾಗ್ ಪಬ್ ಹೊಂದಿದ್ದರು. ಬಿಲ್ಡರ್ ಆಗಿಯೂ ಜಗದೀಶ್ ಸಕ್ರಿಯರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಆಘಾತ ಉಂಟು ಮಾಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.