ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ (Soundarya Jagadish) ಅವರು ನಿಧನರಾಗಿದ್ದು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ದರ್ಶನ್, ಉಪೇಂದ್ರ, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜೊತೆ ಉತ್ತಮವಾದ ಒಡನಾಟ ಹೊಂದಿದ್ದ ಜಗದೀಶ್ ಅವರು ಏಕಾಏಕಿ ಸಾವಿಗೆ (Soundarya Jagadish Death) ಶರಣಾಗಿದ್ದಾರೆ. ಇಂದು (ಏಪ್ರಿಲ್ 11) ಮುಂಜಾನೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಕುರಿತಂತೆ ಎರಡು ಪ್ರಮುಖ ಅನುಮಾನಗಳ ಸೃಷ್ಟಿ ಆಗಿದ್ದವು. ಅವುಗಳಿಗೆ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು ಕೆಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಕೆಲವರ ಅನುಮಾನ. ಯಾಕೆಂದರೆ, ಕೆಲವು ದಿನಗಳ ಹಿಂದೆ ಬ್ಯಾಂಕ್ನವರು ಜಗದೀಶ್ಗೆ ನೋಟಿಸ್ ನೀಡಿ, ಮನೆಯನ್ನು ಸೀಜ್ ಮಾಡಲು ಬಂದಿದ್ದರು ಎಂಬ ಮಾಹಿತಿ ಇದೆ. ಆ ಕಾರಣದಿಂದ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಶಂಕೆ ಕೆಲವರದ್ದು, ಅದಕ್ಕೆ ಗೆಳೆಯ ಶ್ರೇಯಸ್ ಉತ್ತರಿಸಿದ್ದಾರೆ. ‘ಬ್ಯಾಂಕ್ ನೋಟಿಸ್ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲ. ನೋಟಿಸ್ ಇತ್ಯಾದಿ ಎಲ್ಲ ಸುಮಾರು ದಿನದಿಂದ ಇರುವಂಥದ್ದು. ಬಿಸ್ನಿಸ್ ಬೇರೆ, ಇದು ಬೇರೆ. ಅವರೆಡಕ್ಕೂ ಸಂಬಂಧ ಇಲ್ಲ’ ಎಂದು ಶ್ರೇಯಶ್ ಹೇಳಿದ್ದಾರೆ.
ಇದನ್ನೂ ಓದಿ: ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ಹೆಗ್ಗೋಡು ನಿಧನ
ಸೌಂದರ್ಯ ಜಗದೀಶ್ ಅವರಿಗೆ ಹೃದಯಾಘಾತ ಆಗಿರಬಹುದಾ ಅಥವಾ ಏನಾದರೂ ಆರೋಗ್ಯ ಸಮಸ್ಯೆ ಇದ್ದರಬಹುದಾ ಎಂಬ ಶಂಕೆ ಸಹ ವ್ಯಕ್ತವಾಗಿದೆ. ಆ ಬಗ್ಗೆ ಕೂಡ ಶ್ರೇಯಸ್ ಪ್ರತಿಕ್ರಿಯಿಸಿದ್ದಾರೆ. ‘ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡರು. ಕೂಡಲೇ ನಾವು ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದರು. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕಾರಣ ಏನು ಎಂಬುದನ್ನು ನಾವು ಸಡನ್ ಆಗಿ ಹೇಳೋಕೆ ಆಗಲ್ಲ. ಹೃದಯಾಘಾತ ಆಗಿದೆ ಎಂಬುದೆಲ್ಲ ಸುಳ್ಳು. ಆ ರೀತಿ ತಪ್ಪು ಮಾಹಿತಿ ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಹೃದಯಾಘಾತ ಅಂತ ನಾವು ಎಲ್ಲಿಯೂ ಹೇಳಿಲ್ಲ’ ಎಂದಿದ್ದಾರೆ ಸ್ನೇಹಿತ ಶ್ರೇಯಸ್.
ಸೌಂದರ್ಯ ಜಗದೀಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ನಿ ಮತ್ತು ಮಕ್ಕಳು ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಬಾಕಿ ಇದೆ. ಜಗದೀಶ್ ನಿಧನದಿಂದ ಆಪ್ತರು ಮತ್ತು ಕುಟುಂಬದವರಿಗೆ ತೀವ್ರ ದುಃಖ ಉಂಟಾಗಿದೆ. ಸೌಂದರ್ಯ ಜಗದೀಶ್ ಅಗಲಿಕೆಗೆ ಚಿತ್ರತಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.