ಡಾಲಿ ನಟನೆಯ ‘ಕೋಟಿ’ ಸಿನಿಮಾ ಜೂ.14ಕ್ಕೆ ರಿಲೀಸ್; ಹೇಗಿದೆ ನೋಡಿ ಟೀಸರ್
‘ಕೋಟಿ’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಜೂನ್ 14ರಂದು ಈ ಸಿನಿಮಾ ತೆರೆಕಾಣಲಿದೆ. ಡಾಲಿ ಧನಂಜಯ ಅವರ ಅಭಿಮಾನಿಗಳು ಈ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ನಟಿಸುತ್ತಿರುವ ‘ಕೋಟಿ’ (Kotee) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪರಮ್ (ಪರಮೇಶ್ವರ ಗುಂಡ್ಕಲ್) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭದಲ್ಲಿ ಸಿನಿಮಾ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಪಾತ್ರದ ಬಗ್ಗೆ ಡಾಲಿ ಧನಂಜಯ (Daali Dhananjaya) ಮಾತನಾಡಿದ್ದಾರೆ. ‘ಒಂದೇ ಒಂದು ಕೋಟಿ ಸಿಕ್ಕರೆ ಜೀವನದಲ್ಲಿ ಸೆಟ್ಲ್ ಆಗಬಹುದು ಅಂತ ಎಲ್ಲರೂ ಅಂದುಕೊಳ್ತಾರೆ. ಎಲ್ಲರ ಮನೆಗಳಲ್ಲೂ ಈ ಇಂಥ ಅಣ್ಣ, ತಮ್ಮ, ಮಗ ನಿಮಗೆ ಸಿಗುತ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡಿಕೊಳ್ಳಬಹುದು ಅಂದುಕೊಳ್ತಾರೆ’ ಎಂದು ಅವರು ಪಾತ್ರದ ಕುರಿತು ಕಿರು ಪರಿಚಯ ಮಾಡಿಕೊಂಡಿದ್ದಾರೆ.
‘ಎಲ್ಲರ ಒಳಗೂ ಕೋಟಿ ರೀತಿಯ ಒಬ್ಬ ವ್ಯಕ್ತಿ ಇರುತ್ತಾನೆ. ಈ ಪಾತ್ರ ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಅದೇ ರೀತಿ, ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಚಿತ್ರವನ್ನು ನೋಡಬೇಕು’ ಎಂದು ಡಾಲಿ ಹೇಳಿದ್ದಾರೆ. ನಿರ್ದೇಶಕ ಪರಮ್ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರವಾದರೂ ಕಥೆ ಹೇಳುವ ಅನುಭವ ಅವರಿಗೆ ಹೊಸದಲ್ಲ. ಕಿರುತೆರೆ ವಾಹಿನಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗೆ ಇದೆ.
ಈ ಸಿನಿಮಾದಲ್ಲಿ ಧನಂಜಯ್ ಜತೆ ಮೋಕ್ಷಾ ಕುಶಾಲ್ ನಟಿಸುತ್ತಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಕೊಡಗಿನ ಹುಡುಗಿ ಆಗಿರುವ ಮೋಕ್ಷಾಗೆ ಇದು ಮಹತ್ವದ ಸಿನಿಮಾ ಆಗಲಿದೆ. ‘ಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಮೂಲಕ ಹೆಚ್ಚು ಫೇಮಸ್ ಆಗಿರುವ ರಮೇಶ್ ಇಂದಿರಾ ಅವರು ‘ಕೋಟಿ’ ಸಿನಿಮಾದಲ್ಲಿಯೂ ಖಳನಟನಾಗಿ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ಪೃಥ್ವಿ ಶಾಮನೂರು, ತಾರಾ, ಸರದಾರ್ ಸತ್ಯ, ತನುಜಾ ವೆಂಕಟೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
‘ಕೋಟಿ’ ಸಿನಿಮಾದ ಟೀಸರ್:
‘ಜಿಯೋ ಸ್ಟುಡಿಯೋಸ್ ಹಾಗೂ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಅವರಿಂದ ನನ್ನ ಸಿನಿಮಾದ ಕನಸು ನಿಜವಾಗುತ್ತಿದೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಒಳ್ಳೆಯ ಕಥೆಗಳನ್ನು ಹೇಳಬೇಕು ಹಾಗೂ ಬೇರೆ ಧ್ವನಿಗಳು ಕೇಳಿಸಬೇಕು ಎಂಬುದು ಜಿಯೋ ಸ್ಟುಡಿಯೋಸ್ ಸಂಸ್ಥೆಯ ಮೂಲ ಉದ್ದೇಶ. ಕನ್ನಡದಲ್ಲೂ ಇದು ಮುಂದುವರಿಯಬೇಕು ಎಂಬುದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತದೆʼ ಎಂದು ಪರಮ್ ಹೇಳಿದ್ದಾರೆ.
ಇದನ್ನೂ ಓದಿ: ಸೆಟ್ಟೇರಿತು ಡಾಲಿ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ಈ ಚಿತ್ರಕ್ಕೆ ಪ್ರಖ್ಯಾತ್ ಹೀರೋ
ಈ ಸಿನಿಮಾದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳಿವೆ. ಮೂರು ಗೀತೆಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸ್ವತಃ ವಾಸುಕಿ ಒಂದು ಹಾಡನ್ನು ಬರೆದಿದ್ದಾರೆ. ನೊಬಿನ್ ಪೌಲ್ ಅವರು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ ಮಾಡುತ್ತಿದ್ದಾರೆ. ಛಾಯಾಗ್ರಹಣ ಅರುಣ್ ಬ್ರಹ್ಮನ್ ಅವರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.