SPB Birth Anniversary: 16 ಭಾಷೆ, 40 ಸಾವಿರ ಹಾಡು; ಜನ್ಮದಿನದಂದು ಮಹಾನ್​ ಸಾಧಕ ಎಸ್​ಪಿಬಿ ನೆನೆದ ಅಭಿಮಾನಿಗಳು

|

Updated on: Jun 03, 2022 | 9:00 PM

1966ರಲ್ಲಿ ಎಸ್​ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು, ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಪದಾರ್ಪಣೆ ಮಾಡಿದರು.

SPB Birth Anniversary: 16 ಭಾಷೆ, 40 ಸಾವಿರ ಹಾಡು; ಜನ್ಮದಿನದಂದು ಮಹಾನ್​ ಸಾಧಕ ಎಸ್​ಪಿಬಿ ನೆನೆದ ಅಭಿಮಾನಿಗಳು
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ
Follow us on

ಇಂದು (ಜೂನ್​ 4) ಭಾರತ ಚಿತ್ರರಂಗ ಕಂಡ ಮಹಾನ್​ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಮ್​ ಅವರ ಜನ್ಮದಿನ. ಅವರು ಬದುಕಿದ್ದರೆ ಇಂದು 75ನೇ ವಸಂತಕ್ಕೆ ಕಾಲಿಡುತ್ತಿದ್ದರು. ಈಗ ಅವರಿಲ್ಲದೆ ಮೊದಲ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮಿಷ್ಟದ ಗಾಯಕನನ್ನು ನೆನೆದಿದ್ದಾರೆ.

1946ರಲ್ಲಿ ಜೂನ್​ 4ರಂದು ಮದ್ರಾಸ್​ನಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಮ್​ ಜನಿಸಿದರು. ಇಂಜಿನಿಯರ್​ ಆಗಬೇಕೆಂದುಕೊಂಡಿದ್ದ ಅವರು, ಸಂಗೀತದ ಮೇಲೂ ಅಪಾರ ಆಸಕ್ತಿ ಹೊಂದಿದ್ದರು. 1966ರಲ್ಲಿ ಎಸ್​ಪಿಬಿ ಮೊದಲ ಹಾಡನ್ನು ಹಾಡಿದ್ದರು. ಅವರ ಮೊದಲ ಗಾಯನ ಮೂಡಿ ಬಂದಿದ್ದು, ತೆಲುಗಿನಲ್ಲಿ. ನಂತರ ಕನ್ನಡಕ್ಕೆ ಪದಾರ್ಪಣೆ ಮಾಡಿದರು.

ಎಸ್​ಪಿಬಿಗೆ ಹಿಟ್​ ಸಿಕ್ಕಿದ್ದು 1969ರಲ್ಲಿ. ಹಿರಿಯ ನಟ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ತಮ್ಮ ಅಡಿಮೈಪೆನ್ (Adimaipenn)​ ಸಿನಿಮಾದಲ್ಲಿ ಎಸ್​ಪಿಬಿ ಹಾಡಬೇಕು ಎಂದು ಇಚ್ಛಿಸಿದ್ದರು. ಈ ಚಿತ್ರದ ‘ಆಯಿರಾಮ್​ ನಿಲವೆ.. ಹಾಡು ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ನಂತರ ಎಸ್​ಪಿಬಿ ಹಿಂದಿರುಗಿ ನೋಡಲೇ ಇಲ್ಲ. ಎಸ್​.ಪಿ. ಬಾಲಸುಬ್ರಹ್ಮಣ್ಯಮ್​ ಅವರು ಕನ್ನಡ, ತಮಿಳು ತೆಲುಗು, ಹಿಂದಿ ಸೇರಿ 16 ಭಾಷೆಗಳಲ್ಲಿ 40 ಸಾವಿರ ಹಾಡನ್ನು ಹಾಡಿದ್ದಾರೆ.

ಹಲವು ಭಾಷೆಗಳನ್ನು ಮಾತನಾಡುವುದನ್ನು ಕಷ್ಟಪಟ್ಟಾದರೂ ಕಲಿಯಬಹುದು. ಆದರೆ, ಬೇರೆ ಭಾಷೆಯ ಸೊಗಡನ್ನು ಅರ್ಥ ಮಾಡಿಕೊಂಡು ಹಾಡುವುದು ಇದೆಯಲ್ಲ ಅದು ಅಷ್ಟು ಸುಲಭದ ಮಾತಲ್ಲ. ಆದರೆ, ಎಸ್​ಪಿಬಿಗೆ ಅದು ನೀರು ಕುಡಿದಷ್ಟೇ ಸುಲಭದ ಮಾತಾಗಿತ್ತು. ಅವರು 16 ಭಾಷೆಗಳಲ್ಲಿ ಹಾಡಿ ಭೇಷ್​ ಎನಿಸಿಕೊಂಡರು.

ಇನ್ನು, ಎಸ್​ಪಿಬಿ ಹೆಸರಲ್ಲಿ ಹಲವು ದಾಖಲೆ ಕೂಡ ಇವೆ. ಅವರು ಒಂದೇ ದಿನ 21 ಕನ್ನಡ ಹಾಡುಗಳನ್ನು ರೆಕಾರ್ಡ್​ ಮಾಡಿ ದಾಖಲೆ ಮಾಡಿದ್ದಾರೆ. ಇಲ್ಲಿಯವರೆಗೆ ಈ ದಾಖಲೆ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಎಸ್​ಪಿಬಿ ಅವರಿಗೆ ಆರು ಬಾರಿ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.

ಎಸ್​ಪಿಬಿ ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಸಂಗೀತ ಪ್ರೇಮಿಗಳ ಹೃದಯದಲ್ಲಿ ಸುಮಧುರ ಗೀತೆಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಹಾಡುಗಳು ಇಂದಿಗೂ ಕೇಳುಗರ ಕಿವಿಯಲ್ಲಿ ಗುನುಗುತ್ತಿವೆ. ಅವರನ್ನು ಇಂದು ಹಾಡುಗಳ ಮೂಲಕ ಎಲ್ಲರೂ ನೆನೆಯುತ್ತಿದ್ದಾರೆ. ಆನ್​ಲೈನ್​ಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಎಸ್​ಪಿಬಿ ಅವರನ್ನು ಸ್ಮರಿಸಲಾಗುತ್ತಿದೆ.

ಇದನ್ನೂ ಓದಿ:

ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ

Published On - 7:31 am, Fri, 4 June 21