ದೊಡ್ಡ ಅವಕಾಶ ಬಾಚಿಕೊಂಡ ‘ಕೆಜಿಎಫ್’ ಸುಂದರಿ ಶ್ರೀನಿಧಿ ಶೆಟ್ಟಿ

|

Updated on: Oct 21, 2023 | 9:04 PM

Srinidhi Shetty: 'ಕೆಜಿಎಫ್' ಸಿನಿಮಾ ಸರಣಿಯ ನಾಯಕಿ ಶ್ರೀನಿಧಿ ಶೆಟ್ಟಿಗೆ ದೊಡ್ಡ ಮಟ್ಟದ ಅವಕಾಶಗಳು ಲಭಿಸಿರಲಿಲ್ಲ. ಆದರೆ ಈಗ ಒಂದರ ಹಿಂದೊಂದು ಅವಕಾಶಗಳು ಸಿಗಲು ಆರಂಭಿಸಿವೆ.

ದೊಡ್ಡ ಅವಕಾಶ ಬಾಚಿಕೊಂಡ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ
Follow us on

ಕೆಜಿಎಫ್‘ (KGF) ಸಿನಿಮಾ ಕನ್ನಡ ಚಿತ್ರರಂಗವನ್ನು ವಿಶ್ವಭೂಪಟದಲ್ಲಿ ಮತ್ತೊಮ್ಮೆ ಮಿನುಗುವಂತೆ ಮಾಡಿದೆ. ‘ಕೆಜಿಎಫ್’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ದು ಮಾತ್ರವೇ ಅಲ್ಲದೆ, ಕನ್ನಡ ಚಿತ್ರಗಳು ಇತರೆ ಸಿನಿಮಾಗಳಿಗಿಂತಲೂ ಕಡಿಮೆ ಎಂಬುದನ್ನು ಸಾಬೀತು ಮಾಡಿದೆ. ಮಾತ್ರವಲ್ಲ, ಸಿನಿಮಾದಲ್ಲಿ ನಟಿಸಿರುವ ನಟ-ನಟಿಯರಿಗೆ, ಕೆಲಸ ಮಾಡಿದ ತಂತ್ರಜ್ಞರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಆದರೆ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಗೆ (Srinidhi Shetty) ಮಾತ್ರ ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಲಭಿಸಿರಲಿಲ್ಲ. ಆದರೆ ಇದೀಗ, ಶ್ರೀನಿಧಿ, ಕನ್ನಡದ ದೊಡ್ಡ ನಟರೊಬ್ಬರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ನಟ ಸುದೀಪ್​ರ ಮುಂದಿನ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಶ್ರೀನಿಧಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸುದೀಪ್​ರ 47ನೇ ಸಿನಿಮಾಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ಸುದೀಪ್​ರ 47ನೇ ಸಿನಿಮಾವನ್ನು ಸುದೀಪ್​ರ ಹಳೆಯ ಗೆಳೆಯ, ನೆರೆ ಚಿತ್ರರಂಗದ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಸತ್ಯಜ್ಯೋತಿ ಫಿಲಮ್ಸ್.

ತಮಿಳಿನ ಜನಪ್ರಿಯ ನಿರ್ದೇಶಕರಾಗಿರುವ ಚೇರನ್, 1990ರಿಂದಲೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. 1997ರಿಂದಲೂ ಸಿನಿಮಾ ನಿರ್ದೇಶನ ಮಾಡುತ್ತಾ ಬರುತ್ತಿದ್ದಾರೆ. ಸುದೀಪ್ ಕನ್ನಡದಲ್ಲಿ ಮೊದಲ ಬಾರಿ ನಿರ್ದೇಶನ ಮಾಡಿದ ‘ಮೈ ಆಟೋಗ್ರಾಫ್’ ಚೇರನ್ ಅವರ ‘ಆಟೋಗ್ರಾಫ್’ ಸಿನಿಮಾದ ರೀಮೇಕ್ ಆಗಿದೆ. ಈ ಮುಂದೆಯೂ ಚೇರನ್ ಅವರು ಸುದೀಪ್​ಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಲೇ ಇದ್ದವು. ಈಗದು ಖಾತ್ರಿಯಾಗಿದೆ.

ಇದನ್ನೂ ಓದಿ:Srinidhi Shetty: ಇತರೆ ಹೀರೋಯಿನ್​ಗಳ ರೀತಿ ಅಲ್ಲ ಶ್ರೀನಿಧಿ ಶೆಟ್ಟಿ; ‘ಕೆಜಿಎಫ್​’ ಸುಂದರಿಯ ಸೂತ್ರವೇ ಬೇರೆ

ಇನ್ನು ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವ ಸತ್ಯಜ್ಯೋತಿ ಫಿಲಮ್ಸ್​, ತಮಿಳು ಚಿತ್ರರಂಗದ ಹಿರಿಯ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. 1982ರಿಂದಲೂ ಸಿನಿಮಾ ನಿರ್ಮಾಣ ಮಾಡುತ್ತಾ ಬರುತ್ತಿರುವ ಸತ್ಯಜ್ಯೋತಿ ಫಿಲಮ್ಸ್, ಅಜಿತ್ ಕುಮಾರ್, ಧನುಶ್, ರಜನೀಕಾಂತ್, ಕಮಲ್ ಹಾಸನ್ ಅಂಥಹಾ ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಪ್ರಸ್ತುತ ಧನುಶ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸುತ್ತಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಕ್ಕೂ ಈ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ.

ಇನ್ನು ತಮಗೆ ಸುದೀಪ್ ಜೊತೆ ನಟಿಸುವ ಅವಕಾಶ ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಖುಷಿ ಹಂಚಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ, ”ಈ ಹೊಸ ಆರಂಭಕ್ಕೆ ನನಗೆ ನಿಮ್ಮ ಆಶೀರ್ವಾದ ಬೇಕಿದೆ. ಈ ಅದ್ಭುತ ಅವಕಾಶ ನೀಡಿದ್ದಕ್ಕೆ ನಾನು ಸತ್ಯಜ್ಯೋತಿ ಫಿಲಮ್ಸ್ ಹಾಗೂ ನಿರ್ದೇಶಕ ಚೇರನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಪ್ರೀತಿಯ ಬಾದ್​ಷಾ ಕಿಚ್ಚ ಸುದೀಪ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವುದಕ್ಕೆ ಬಹಳ ಉತ್ಸುಕಳಾಗಿದ್ದೇನೆ” ಎಂದಿದ್ದಾರೆ. ಅಂದಹಾಗೆ ಶ್ರೀನಿಧಿ ಶೆಟ್ಟಿ ತೆಲುಗಿನ ‘ತೆಲುಗು ಕದಾ’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿದ್ದು ಜೊನ್ನಲಗಡ್ಡ ನಾಯಕನಾಗಿರುವ ಈ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದೆ. ‘ಕೆಜಿಎಫ್​ 1 ಹಾಗೂ 2’ ಸೇರಿದಂತೆ ಈವರೆಗೆ ಕೇವಲ ಮೂರು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಿಧಿ ಇದೀಗ ಒಂದರ ಹಿಂದೊಂದರಂತೆ ಎರಡು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಇನ್ನು ನಟ ಸುದೀಪ್ ಪ್ರಸ್ತುತ ‘ಮ್ಯಾಕ್ಸ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ವಿಜಯ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದಾದ ಬಳಿಕ ಚೇರನ್ ಜೊತೆಗಿನ ಸಿನಿಮಾ ಪ್ರಾರಂಭ ಆಗಲಿದೆ. ಚೇರನ್ ಜೊತೆಗಿನ ಸಿನಿಮಾದ ಬಳಿಕ ಸುದೀಪ್ ತಾವೇ ಸ್ವತಃ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಕೆಆರ್​ಜಿ ಪ್ರೊಡಕ್ಷನ್​ಗಾಗಿ ಸುದೀಪ್ ಒಂದು ಸಿನಿಮಾವನ್ನು ನಿರ್ದೇಶಿಸಿ, ತಾವೇ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ