ದೇಶದೆಲ್ಲೆಡೆ ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಕನ್ನಡದಲ್ಲೊಂದು ಹೊಸ ಸಿನಿಮಾ (Kannada Cinema) ಅನೌನ್ಸ್ ಮಾಡಲಾಗಿದೆ. ಅಯೋಧ್ಯೆಯ ಶ್ರೀರಾಮ ಮಂದಿರ (Ayodhya Ram Mandir) ಕುರಿತು ಈ ಸಿನಿಮಾ ಮೂಡಿಬರಲಿದೆ. ಹಾಗಾಗಿ ಚಿತ್ರತಂಡದವರು ಇದನ್ನು ರಾಮ ಮಂದಿರದ ಬಯೋಪಿಕ್ ಎಂದು ಕರೆಯುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸ್ ರಾಜು (Srinivas Raju) ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಶೀರ್ಷಿಕೆ ಅಂತಿಮವಾಗಿಲ್ಲ. ‘ಸತ್ಯಂ ಶಿವಂ ಸುಂದರಂ’ ಎನ್ನುವ ಟ್ಯಾಗ್ಲೈನ್ ಇದೆ. ‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನಿರ್ಮಿಸಿರುವ ಪ್ರಶಾಂತ್ ಜಿ. ರುದ್ರಪ್ಪ ಅವರು ‘ತ್ರಿಶೂಲ್ ಎಂಟರ್ಟೈನ್ಮೆಂಟ್’ ಸಂಸ್ಥೆಯ ಮೂಲಕ ರಾಮ ಮಂದಿರದ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದ್ದರ ಹಿಂದೆ ನೂರಾರು ವರ್ಷಗಳ ಇತಿಹಾಸ ಇದೆ. ಅನೇಕ ಹೋರಾಟಗಳ ಕಹಾನಿ ಇದೆ. ಬಾಬರಿ ಮಸೀದಿ ವರ್ಸಸ್ ರಾಮ ಮಂದಿರದ ಜಟಾಪಟಿ ಹಲವಾರು ವರ್ಷಗಳ ಕಾಲ ನಡೆದು ಬಂತು. ಅಂತಿಮವಾಗಿ ಆ ಜಾಗದಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಆದ ಬಳಿಕ ಈ ವರ್ಷ ಮೊದಲ ಬಾರಿ ರಾಮ ನವಮಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಈ ಘೋಷಣೆ ಮಾಡಿದ್ದಾರೆ.
‘ಈ ಸಿನಿಮಾದಲ್ಲಿ ಅಂದಾಜು 500 ವರ್ಷಗಳ ಇತಿಹಾಸವನ್ನು ಪರದೆ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಬಾಬರಿ ಮಸೀದಿಗೂ ಮೊದಲು ರಾಜಾ ವಿಕ್ರಮಾದಿತ್ಯ ಶ್ರೀರಾಮ ಮಂದಿರವನ್ನು ಸ್ಥಾಪಿಸಿದ ಕಾಲದಿಂದ ಈ ಸಿನಿಮಾ ಕಥೆ ಆರಂಭ ಆಗುತ್ತದೆ. ಅದರ ಜೊತೆಗೆ ರಾಮಾಯಣದ ಒಂದಷ್ಟು ಅಂಶಗಳು ಇರಲಿವೆ. ಆದರೆ ಇದು ಸಂಪೂರ್ಣ ರಾಮಾಯಣದ ಕಥೆಯಿರುವ ಸಿನಿಮಾ ಅಲ್ಲ. ರಾಮ, ಸೀತೆ, ಹನುಮಂತ, ದಶರಥ, ವಾಲಿ ಮತ್ತು ವಾಲ್ಮೀಕಿ ಪಾತ್ರಗಳ ಜೊತೆ ತುಳಿಸಿದಾಸರ ಪಾತ್ರ ಸಹ ಇರಲಿವೆ’ ಎಂದು ಶ್ರೀನಿವಾಸ್ ರಾಜು ಹೇಳಿದ್ದಾರೆ.
ಇದನ್ನೂ ಓದಿ: Ram Navami 2024: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?
‘ಶ್ರೀರಾಮನ ಆದರ್ಶ ಗುಣಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ‘ಸತ್ಯಂ ಶಿವಂ ಸುಂದರಂ’ ಎಂಬ ಟ್ಯಾಗ್ ಲೈನ್ ಈ ಸಿನಿಮಾಗೆ ಇದೆ. 3 ಭಾಗಗಳಲ್ಲಿ ಸಿನಿಮಾ ಬರುತ್ತದೆ. ಟೈಟಲ್ ಇನ್ನು ನಿಗದಿ ಆಗಿಲ್ಲ. ಈ ಸಿನಿಮಾ ತುಂಬ ಅದ್ದೂರಿಯಾಗಿ ನಿರ್ಮಾಣ ಆಗಲಿದೆ. ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಇರಲಿದ್ದಾರೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.