
ನಟ, ನಿರೂಪಕ ಸೃಜನ್ ಲೋಕೇಶ್ (Srujan Lokesh) ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾಗೆ ‘ಜಿಎಸ್ಟಿ’ (GST) ಎಂದು ಶೀರ್ಷಿಕೆ ಇಡಲಾಗಿದೆ. ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ನಿರ್ಮಾಣ ಮಾಡಿದ್ದಾರೆ. ಸಂದೇಶ್ ನಾಗರಾಜ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ನವೆಂಬರ್ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿದೆ. ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಟ್ರೇಲರ್ ರಿಲೀಸ್ ಮಾಡಿದರು. ಪ್ರಿಯಾಂಕಾ ಉಪೇಂದ್ರ ಅವರು ಹಾಡಿನ ಪ್ರೋಮೋ ರಿಲೀಸ್ ಮಾಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮಕ್ಕೆ ನಟಿ ತಾರಾ ಅನುರಾಧ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸೃಜನ್ ಲೋಕೇಶ್ ಮಾತನಾಡಿದರು. ‘ಇದು ನಾನು ಕಂಡ ಕನಸು. ಅದನ್ನು ನನಸು ಮಾಡಿದವರು ನಿರ್ಮಾಪಕ ಸಂದೇಶ್. ನಾನು ಈ ಸಿನಿಮಾ ಮೂಲಕ ನಿರ್ದೇಶಕನಾಗಿದ್ದೇನೆ. ನಮ್ಮ ತಾತಾ ಸುಬ್ಬಯ್ಯ ನಾಯ್ಡು ಅವರು ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ನಮ್ಮ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ಬಳಿಕ ನಮ್ಮ ತಂದೆ ನಿರ್ದೇಶನದ ‘ಬುಜಂಗಯ್ಯನ ದಶಾವತಾರ’ ಚಿತ್ರದ ಮೂಲಕ ಬಾಲನಟನಾಗಿ ನಾನು ಚಿತ್ರರಂಗಕ್ಕೆ ಬಂದೆ. ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ’ ಎಂದು ಸೃಜನ್ ಹೇಳಿದರು.
‘ಈ ಸಿನಿಮಾದಲ್ಲಿ ನಮ್ಮ ತಾಯಿ, ನಾನು ಹಾಗೂ ನನ್ನ ಮಗ ನಟಿಸಿದ್ದೇವೆ. ಇದು ಹಾರಾರ್ ಸಿನಿಮಾ ಆದರೂ ನಗುವೇ ಪ್ರಧಾನ. ಯಾವುದೇ ಸಂದೇಶ ನೀಡದೇ ನಗುವಿನ ಮೂಲಕ ಜನರ ಮನಸ್ಸನ್ನು ಗೆಲ್ಲಲ್ಲಿದ್ದೇನೆ. ಲೋಕೇಶ್ ಮ್ಯೂಸಿಕ್ ಎಂಬ ಮ್ಯೂಸಿಕ್ ಸಂಸ್ಥೆ ಸಹ ಆರಂಭಿಸಿದ್ದೇನೆ. ಅದರಲ್ಲಿ ನಮ್ಮ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿದೆ. ಯಾರು ಊಹಿಸಲಾಗದ 4O ನಿಮಿಷಗಳ ಕ್ಲೈಮ್ಯಾಕ್ಸ್ ಇದೆ’ ಎಂದಿದ್ದಾರೆ ಸೃಜನ್ ಲೋಕೇಶ್.
ನಿರ್ಮಾಪಕ ಸಂದೇಶ್ ಅವರು ಮಾತನಾಡಿ, ‘ನಾನು ಈ ಸಿನಿಮಾದ ಕಥೆ ಕೇಳಿಲ್ಲ. ಸೃಜನ್ ನನ್ನ ಆತ್ಮೀಯ ಸ್ನೇಹಿತ. ಅವರು ಒಳ್ಳೆಯ ಸಿನಿಮಾ ಮಾಡಿರುತ್ತಾರೆ ಎಂಬ ನಂಬಿಕೆ ಇದೆ. ಇದು ನಮ್ಮ ಸಂಸ್ಥೆಯಿಂದ ನಿರ್ಮಾಣ ಆದ 34ನೇ ಸಿನಿಮಾ. ಎಂದಿನಂತೆ ಈ ಸಿನಿಮಾಗೂ ನಿಮ್ಮೆಲ್ಲರ ಬೆಂಬಲವಿರಲಿ’ ಎಂದು ಹೇಳಿದರು. ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದ ನಾಯಕಿ ರಜನಿ ಭಾರದ್ವಾಜ್ ಅವರು ತಮ್ಮ ಪಾತ್ರದ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು
ಗಿರಿಜಾ ಲೋಕೇಶ್ ಅವರು ಮಾತನಾಡಿ, ‘ಕನ್ನಡ ಚಿತ್ರರಂಗದ ಹಲವು ಪ್ರಥಮಗಳು ಸುಬ್ಬಯ್ಯ ನಾಯ್ಡು ಅವರ ಕುಟುಂಬದ್ದೇ ಆಗಿರುವುದು ನಮಗೆ ಹೆಮ್ಮೆ ಇದೆ. ನಮ್ಮ ಕುಟುಂಬಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹ ಈ ಸಿನಿಮಾದಲ್ಲೂ ಮುಂದುವರಿಯಲಿ’ ಎಂದರು. ಹಿರಿಯ ನಟ ಅಶೋಕ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.