ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾ ಟ್ರೇಲರ್ ಬಿಡುಗಡೆ; ಸಾಥ್ ನೀಡಿದ ಸುನೀಲ್ ಶೆಟ್ಟಿ
ತುಳು ಮತ್ತು ಕನ್ನಡದಲ್ಲಿ ರೂಪೇಶ್ ಶೆಟ್ಟಿ ಅಭಿನಯದ ‘ಜೈ’ ಸಿನಿಮಾ ಟ್ರೇಲರ್ ಬಿಡುಗಡೆ ಆಗಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷ. ನವೆಂಬರ್ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸುನೀಲ್ ಶೆಟ್ಟಿ ಅತಿಥಿ ಪಾತ್ರ ಮಾಡಿದ್ದಾರೆ.

ಬಿಡುಗಡೆಗೂ ಮುನ್ನವೇ ‘ಜೈ’ ಸಿನಿಮಾ (Jai Movie) ಸಾಕಷ್ಟು ಸದ್ದು ಮಾಡುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ಉಪೇಂದ್ರ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಮಧು ರಾವ್, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೂಪೇಶ್ ಶೆಟ್ಟಿ ಹಾಗೂ ‘ಜೈ’ ಸಿನಿಮಾ ತಂಡಕ್ಕೆ ಎಲ್ಲರೂ ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ಹುಲಿ ಕುಣಿತ ಕೂಡ ಗಮನ ಸೆಳೆಯಿತು. ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರು ಆಗಮಿಸಿದ್ದರಿಂದ ಸ್ಟಾರ್ ಮೆರುಗು ಹೆಚ್ಚಿತ್ತು.
‘ಜೈ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ ಕೂಡ ಆಗಮಿಸಿದ್ದರು. ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು. ‘ತುಳುನಲ್ಲಿ ಸಣ್ಣದಾಗಿ ಮಾಡಬೇಕೆಂದು ಶುರು ಮಾಡಿದ ಸಿನಿಮಾ ಇದು. ಈಗ ವಿದೇಶದಲ್ಲೂ ಪ್ರೀಮಿಯರ್ ಪ್ರದರ್ಶನ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ತುಳು ಸಿನಿಮಾ ಈಗ ಕನ್ನಡ ಹಾಗೂ ತುಳು ಸಿನಿಮಾವಾಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್ ಶೆಟ್ಟಿ ಅಣ್ಣ’ ಎಂದರು ರೂಪೇಶ್ ಶೆಟ್ಟಿ.
‘ಸುನೀಲ್ ಶೆಟ್ಟಿ ಅವರಿಗೆ ನಾವು ಯಾರು ಅಂತಾನೆ ಗೊತ್ತಿರಲಿಲ್ಲ. ನಿರ್ಮಾಪಕರ ಕಡೆಯಿಂದ ಭೇಟಿಯಾಗಿ ಮನವಿ ಮಾಡಿಕೊಂಡೆವು. ಅವರ ಬೆಂಬಲ ಸಿಕ್ಕರೆ ನಮ್ಮ ಸಿನಿಮಾ ದೊಡ್ಡ ಮಟ್ಟಕ್ಕೆ ಹೋಗುತ್ತದೆ ಅಂತ ಕೇಳಿಕೊಂಡೆವು. ಅವರು ಒಪ್ಪಿಕೊಂಡರು. ಸಿನಿಮಾ ಮುಗಿಸಿ ಹೋಗಿ ಬಿಡಬಹುದಿತ್ತು. ಆದರೆ ಪ್ರಚಾರಕ್ಕೂ ನಮ್ಮ ಜೊತೆಗೆ ನಿಂತಿದ್ದಾರೆ’ ಎಂದು ರೂಪೇಶ್ ಶೆಟ್ಟಿ ಅವರು ಸುನೀಲ್ ಶೆಟ್ಟಿಗೆ ಧನ್ಯವಾದ ತಿಳಿಸಿದರು.
‘ಜೈ’ ಸಿನಿಮಾ ಟ್ರೇಲರ್:
ಈ ವೇಳೆ ನಟ ಸುನೀಲ್ ಶೆಟ್ಟಿ ಅವರು ಮಾತನಾಡಿದರು. ‘ನಾನು ಕರ್ನಾಟಕದವನು. ಬೆಂಗಳೂರಿಗೆ ಆಗಾಗ ಬರುತ್ತಾ ಇರುತ್ತೇನೆ. ನನ್ನ ಸಹೋದರಿ ಸೇರಿದಂತೆ ನನ್ನ ಸಂಬಂಧಿಕರು ಇಲ್ಲಿದ್ದಾರೆ. ಸಾಕಷ್ಟು ನೆನಪುಗಳು ಬೆಂಗಳೂರಿನ ಜೊತೆಗೆ ಇದೆ. ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರು ನನಗೆ ಆಪ್ತರಾಗಿದ್ದರು. ಕಿಚ್ಚ ಸುದೀಪ ಕೂಡ ಆತ್ಮೀಯರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ಅದು ನನ್ನ ಕರ್ಮ ಭೂಮಿ. ಆದರೆ ನನ್ನ ಜನ್ಮ ಭೂಮಿ ಕರ್ನಾಟಕದ ಮುಲ್ಕಿ’ ಎಂದು ಸುನೀಲ್ ಶೆಟ್ಟಿ ಅವರು ಹೇಳಿದರು.
ಇದನ್ನೂ ಓದಿ: ಮಸ್ಕಟ್ನಲ್ಲಿ ‘ಜೈ’ ಸಿನಿಮಾದ ಮೊದಲ ಪ್ರೀಮಿಯರ್, ಖುಷಿಯಲ್ಲಿ ರೂಪೇಶ್
ನಟ ರಾಜ್ ದೀಪಕ್ ಶೆಟ್ಟಿ ಅವರು ರೂಪೇಶ್ ಶೆಟ್ಟಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ರೂಪೇಶ್ ಶೆಟ್ಟಿ ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಆದರೆ ಅವರ ಆಲೋಚನೆ ತುಂಬಾ ದೊಡ್ಡದು. ರೀಲ್ ಅಷ್ಟೇ ಅಲ್ಲ ರಿಯಲ್ ಜೀವನಕ್ಕೂ ಬೇಕಾಗಿರುವಂತಹ ಕೆಲವು ವಿಚಾರಗಳನ್ನ ಅವರಿಂದ ತಿಳಿದುಕೊಂಡಿದ್ದೇನೆ’ ಎಂದು ಅವರು ಹೇಳಿದರು. ಈ ಚಿತ್ರದಲ್ಲಿ ಒಂದು ಹಾಡಿಗೆ ಧ್ವನಿ ನೀಡಿರುವ ಗುರು ಕಿರಣ್ ಅವರು ಕೂಡ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಒಂದು ಲೆಕ್ಕದಲ್ಲಿ ನಾನು ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣವೇ ಸುನೀಲಣ್ಣ. ಅದನ್ನ ಯಾವತ್ತು ಮರೆಯೋದಕ್ಕೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




