ಸ್ವತಃ ಅನುಭವಿ ನಿರ್ಮಾಪಕ, ನಟರಾಗಿರವ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅನಾರೋಗ್ಯದ ನಡುವೆಯೂ ಸಿನಿಮಾಗಳಲ್ಲಿ ನಟಿಸುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮಾಡುತ್ತಿದ್ದಾರೆ. ಕನ್ನಡದ ಹೊಸ ಪ್ರತಿಭೆಗಳ (New Talent) ಮೇಲೆ ಇತ್ತೀಚೆಗಷ್ಟೆ ಸಂದರ್ಶನದಲ್ಲಿ ಮಾತನಾಡಿ ಭರವಸೆ ವ್ಯಕ್ತಪಡಿಸಿದ್ದ ರಾಘವೇಂದ್ರ ರಾಜ್ಕುಮಾರ್ ಇದೀಗ ಹೊಸಬರ ತಂಡವೊಂದಕ್ಕೆ ಬೆಂಬಲ ನೀಡಿದ್ದಾರೆ.
ಸಾಯಿಸಾಗರ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ವಿದ್ಯಾಸಾಗರ್ ಅವರು ನಿರ್ಮಿಸಿರುವ, ಲಾಲಿ ರಾಘವ ನಿರ್ದೇಶನದಲ್ಲಿ ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ “ಸ್ಥಬ್ಧ” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು.
ಭ್ರಮೆಯ ಸುತ್ತ ನಡೆಯುವ ಕಥೆಯನ್ನು ಸ್ಥಬ್ಧ ಒಳಗೊಂಡಿದೆ. ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ನಲವತ್ತೈದು ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಲಾಲಿ ರಾಘವ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿರ್ಮಾಪಕರಿಗೆ ಧನ್ಯವಾದ. ಜೂನ್ 9 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಾಯಕ ಪ್ರತಾಪ್ ಸಿಂಹ.
ಇದನ್ನೂ ಓದಿ:ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿದ ರಾಘವೇಂದ್ರ ರಾಜ್ಕುಮಾರ್
ನಿರ್ಮಾಪಕ ವಿದ್ಯಾ ಸಾಗರ್ ನಮ್ಮಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ನಮ್ಮ ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಲಾಲಿ ರಾಘವ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿಯಿದೆ ಎಂದು ನಿರ್ಮಾಪಕ ವಿದ್ಯಾಸಾಗರ್ ತಿಳಿಸಿದರು. ತಮ್ಮ ಪಾತ್ರದ ಬಗ್ಗೆ ನಾಯಕಿ ಹರ್ಷಿಕಾ ಪೂಣಚ್ಛ ಮಾಹಿತಿ ನೀಡಿದರು. ನಟ ಭಜರಂಗಿ ಪ್ರಸನ್ನ, ಸಂಗೀತ ನಿರ್ದೇಶಕ ಆರವ್ ರಿಷಿಕ್, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಹೊಸ ಅಲೆ ಬಂದಿದೆ. ಹಲವು ಹೊಸಬರು ನುರಿತ ನಿರ್ದೇಶಕರಿಗಿಂತಲೂ ಚೆನ್ನಾಗಿ ಕತೆ ಹೇಳುತ್ತಿದ್ದಾರೆ. ಸ್ಥಬ್ಧ ಸಿನಿಮಾವೂ ಅದೇ ಸಾಲಿಗೆ ಸೇರುತ್ತದೆಯೇ ಇಲ್ಲವೊ ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ