‘ದೂರ ತೀರ ಯಾನ’ ಪಯಣ ಮತ್ತು ಪ್ರೇಮದ ಕತೆ: ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ
Doora Theera Yana: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ತಮ್ಮ ‘ಮಾಮೂಲಿ’ ಹಾದಿಯಿಂದ ತುಸು ಹೊರಳಿದ್ದಾರೆ. ಪ್ರೇಮಕಥಾ ಸಿನಿಮಾದೊಂದಿಗೆ ಅವರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮಂಸೋರೆ ‘ದೂರ ತೀರ ಯಾನ’ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’, ‘19-20-21’ ಸಿನಿಮಾಗಳನ್ನು ನಿರ್ದೇಶಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ಇದೀಗ ‘ದೂರ ತೀರ ಯಾನ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಸಾಮಾಜಿಕ ಸಂದೇಶವುಳ್ಳ, ವ್ಯವಸ್ಥೆಯನ್ನು ಪ್ರಶ್ನಿಸುವ ಕತೆಗುಳ್ಳ ಸಿನಿಮಾಗಳನ್ನು ಮಾಡಿದ್ದ ಮಂಸೋರೆ, ಇದೇ ಮೊದಲ ಬಾರಿಗೆ ಪ್ರೇಮಕತೆಯೊಂದನ್ನು ಸಿನಿಮಾ ಆಗಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದು (ಜೂನ್ 28) ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್.
‘ದೂರ ತೀರ ಯಾನ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿರುವ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ರೈಲರ್ ಅನ್ನು ವೀಕ್ಷಿಸಿ ಮೆಚ್ಚಿಕೊಂಡಿರುವ ಸುದೀಪ್, ವಿಶೇಷವಾಗಿ ಸಿನಿಮಾದ ಸಂಗೀತವನ್ನು ಕೊಂಡಾಡಿದ್ದಾರೆ. ಮಂಸೋರೆಯ ಪ್ರಯತ್ನವನ್ನು ಗುರುತಿಸಿದ ಸುದೀಪ್, ಅವರು ಈ ಹಿಂದೆಯೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಬಾರಿ ತನ್ನ ‘ಮಾಮೂಲಿ’ ದಾರಿ ಬಿಟ್ಟು ಹೊಸ ರೀತಿಯ ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ. ಟ್ರೈಲರ್ ನೋಡಿದಾಗಲೂ ಅವರೊಂದು ಸ್ವಚ್ಛವಾದ ಕತೆಯನ್ನು ಕಟ್ಟಿಕೊಟ್ಟಂತೆ ತೋರುತ್ತಿದೆ. ಹೊಸ ನಟ-ನಟಿಯರು ಚೆನ್ನಾಗಿ ನಟಿಸಿದ್ದಾರೆ. ಎಲ್ಲರೂ ಅವರಿಗೆ ಬೆಂಬಲ ನೀಡಿ’ ಎಂದಿದ್ದಾರೆ.
ಟ್ರೈಲರ್ ನೋಡಿದರೆ ‘ದೂರ ತೀರ ಯಾನ’ ಸಿನಿಮಾ ಅಪ್ಪಟ ಪ್ರೇಮಕತೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದೇ ‘ಇಸಂ’ಗಳಲ್ಲಿದ ಪ್ರೇಮಕತೆ ಇದಾಗಿರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಪ್ರೇಮಿಗಳು ಪರಸ್ಪರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ, ಈ ಪ್ರಯತ್ನದಲ್ಲಿ ಅವರಿಗೆ ನೆರವಾಗುವ, ಅನುಭವಗಳನ್ನು ಹಂಚಿಕೊಳ್ಳುವ ಹಿರಿಯರು, ಪ್ರಯಾಣ, ಬೆಟ್ಟ, ಕಾಡು, ಸಮುದ್ರ, ಥಾರ್ ಕಾರು, ಸಂಗೀತ ಪ್ರೀತಿಯ ಮೋಹಕತೆಯನ್ನು ಇನ್ನಷ್ಟು ಸುಂದರಗೊಳಿಸುವ ಹಲವು ವಿಷಯಗಳು ಸಿನಿಮಾನಲ್ಲಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ:ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ಸಿನಿಮಾನಲ್ಲಿ ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ಅರುಣ್ ಸಾಗರ್ ಇನ್ನೂ ಕೆಲವು ಹಿರಿಯ ನಟರುಗಳು ಸಹ ಇದ್ದಾರೆ. ಮಂಸೋರೆಯ ‘ನಾತಿಚರಾಮಿ’ ಸಿನಿಮಾನಲ್ಲಿ ನಟಿಸಿದ್ದ ಶ್ರುತಿ ಹರಿಹರನ್ ಅವರು ಈ ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ‘ನಾತಿಚರಾಮಿ’ ಪಾತ್ರ ಇಲ್ಲಿಯೂ ಮುಂದುವರೆದಂತಿದೆ. ರೊನಾಟ ಬಕ್ಕೇಶ್ ಅವರು ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಿರ್ಮಾಣ ಮಾಡಿರುವುದು ದೇವರಾಜ್ ಆರ್. ಸಿನಿಮಾ ಜುಲೈ 11 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




