ತಿಂಡಿಗೆ ಟೀ-ಬನ್, ತಿಂಗಳಿಗೆ ಒಂದೇ ಮೊಟ್ಟೆ: ಸುದೀಪ್ ಮುಂಬೈ ದಿನಗಳು ಸುಲಭದ್ದಾಗಿರಲಿಲ್ಲ
Sudeep: ಕಿಚ್ಚ ಸುದೀಪ್ ಈಗ ಸೂಪರ್ ಸ್ಟಾರ್, ನಟನಾಗುವ ಮುನ್ನವೂ ಸುದೀಪ್ ಮೇಲ್ ಮಧ್ಯಮ ವರ್ಗದ ಕುಟುಂಬದಲ್ಲೇ ಜನಿಸಿದ್ದರು. ಹಾಗೆಂದು ಅವರ ಸಿನಿ ಜರ್ನಿ ಹೂವಿನ ಹಾದಿ ಆಗಿರಲಿಲ್ಲ. ಮುಂಬೈನಲ್ಲಿ ಅವರು ಬಹಳ ಕಷ್ಟದ ದಿನಗಳನ್ನು ಕಳೆದಿದ್ದಾರೆ. ತಿಂಡಿಗೆ ಟಿ-ಬನ್ನು ತಿಂದುಕೊಂಡು ವರ್ಷಗಳನ್ನು ಕಳೆದಿದ್ದರು. ಸುದೀಪ್ರ ಮುಂಬೈ ದಿನಗಳ ಮೆಲುಕು ಇಲ್ಲಿದೆ.
ಸುದೀಪ್ (Sudeep) ಚಿನ್ನದ ಸ್ಪೂನು ಬಾಯಲ್ಲಿಟ್ಟುಕೊಂಡು ಜನಿಸಿದವರು ಎಂದು ಕೆಲವರು ಹೇಳುತ್ತಾರೆ. ಹೌದು ಸುದೀಪ್ ತಂದೆ ಒಂದು ಮಟ್ಟಿಗೆ ಸ್ಥಿತಿವಂತರಾಗಿದ್ದರು, ಸಿನಿಮಾ ರಂಗದೊಡನೆ ಆಪ್ತತೆ ಹೊಂದಿದ್ದರು. ಹಾಗೆಂದ ಮಾತ್ರಕ್ಕೆ ಸುದೀಪ್ರ ಸಿನಿಮಾ ಜರ್ನಿ ಸರಳವಾಗೇನೂ ಇರಲಿಲ್ಲ. ಬಹುತೇಕ ಹೊಸ ನಟ-ನಟಿಯರು ಪಡುವ ಕಷ್ಟಗಳನ್ನು ಸುದೀಪ್ ಸಹ ಎದುರಿಸಿದ್ದಾರೆ. ನಟನಾಗಬೇಕೆಂಬ ಛಲದಿಂದ ಬೆಂಗಳೂರಿನಲ್ಲಿದ್ದ ಕಂಫರ್ಟ್ ಜೀವನ ಬಿಟ್ಟು ದುಬಾರಿ ನಗರ ಮುಂಬೈನಲ್ಲಿ ಟೀ-ಬನ್ನು ತಿಂದುಕೊಂಡು ವರ್ಷಗಳು ಸವೆಸಿದ್ದಾರೆ. ಸುದೀಪ್ ಮುಂಬೈ ದಿನಗಳು ಹೇಗಿದ್ದವು? ಇಲ್ಲಿದೆ ಒಂದು ಮೆಲುಕು.
ನಟನಾಗಬೇಕೆಂಬ ಕನಸು ಕಂಡಿದ್ದ ಸುದೀಪ್ ಅದಕ್ಕಾಗಿ ತಯಾರಿ ಪಡೆಯಲೆಂದು 90ರ ದಶಕದಲ್ಲಿ ಮುಂಬೈಗೆ ಬಂದಿದ್ದರು. ಮುಂಬೈನಲ್ಲಿ ಕೆಲ ವರ್ಷಗಳ ಕಾಲ ತಂಗಿದ್ದರು. ಮುಂಬೈನಲ್ಲಿ ರೋಷನ್ ತನೇಜಾ ಅವರ ನಟನಾ ಶಾಲೆಗೆ ಸೇರಿ ಅಲ್ಲಿಯೇ ಅಭಿನಯದ ಪಟ್ಟುಗಳನ್ನು ಕಲಿತರು ಸುದೀಪ್. ರೋಷನ್ ತನೇಜಾರ ಅಭಿನಯ ತರಗತಿಗೆ ಬಹಳ ಹತ್ತಿರದಲ್ಲೇ ಇದ್ದ ಸಿಲ್ವರ್ ಹೆಸರಿನ ಹಳೆಯ ಅಪಾರ್ಟ್ಮೆಂಟ್ ಒಂದರಲ್ಲಿ ಸಣ್ಣ ರೂಂನಲ್ಲಿ ಸುದೀಪ್ ವಾಸಿಸುತ್ತಿದ್ದರು. ತರಗತಿಗೆ ಹತ್ತಿರ ಎಂಬ ಕಾರಣಕ್ಕೆ ಅಲ್ಲಿಯೇ ರೂಂ ಮಾಡಿದ್ದರು ಸುದೀಪ್.
ಅವರೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ, ಅವರ ರೂಂಗೆ ಹತ್ತಿರದಲ್ಲಿ ಬಿಸ್ಮಿಲ್ಲಾ ರೆಸ್ಟೊರೆಂಟ್ ಹೆಸರಿನ ಒಂದು ಹೋಟೆಲ್ ಇತ್ತಂತೆ. ಸುದೀಪ್ ಪ್ರತಿದಿನ ಬೆಳಿಗ್ಗೆ ಅಲ್ಲಿ ಟೀ-ಬನ್ ತಿಂದು ತರಗತಿಗೆ ತೆರಳುತ್ತಿದ್ದರಂತೆ. ಟೀ-ಬನ್ ಅವರ ಪ್ರತಿದಿನದ ಉಪಹಾರ ಆಗಿತ್ತಂತೆ. ತಿಂಗಳಿಗೊಮ್ಮೆ ಮಾತ್ರ ಮೊಟ್ಟೆ ಖರೀದಿಸಿ ತಿನ್ನುತ್ತಿದ್ದರಂತೆ ಸುದೀಪ್. ಇನ್ನು ಮಧ್ಯಾಹ್ನದ ಸಮಯ ಅದೇ ಹೋಟೆಲ್ನಲ್ಲಿ ರೈಸ್ ತೆಗೆದುಕೊಳ್ಳುತ್ತಿದ್ದರಂತೆ. ಟೇಬಲ್ ಮೇಲೆ ಇಟ್ಟಿರುತ್ತಿದ್ದ ಮೆಣಸಿನ ಪುಡಿ, ಉಪ್ಪು, ಟೊಮೆಟೊ, ಚಿಲ್ಲಿ ಸಾಸ್ಗಳನ್ನು ಸೇರಿಸಿಕೊಂಡು ಫ್ರೈಡ್ ರೈಸ್ ರೀತಿ ಮಾಡಿಕೊಂಡು ತಿಂದುಬಿಡುತ್ತಿದ್ದರಂತೆ.
ಇದನ್ನೂ ಓದಿ:ಸುದೀಪ್ ಹೀರೋ ಆಗುವ ಮುನ್ನವೇ ನಡೆದಿತ್ತೊಂದು ದುರ್ಘಟನೆ
ಪ್ರತಿದಿನ ಹೋಟೆಲ್ಗೆ ಬರುತ್ತಿದ್ದ ಸುದೀಪ್ರನ್ನು ಕಂಡಿದ್ದ ಬಿಸ್ಮಿಲ್ಲಾ ರೆಸ್ಟೊರೆಂಟ್ ಮಾಲೀಕ, ಸುದೀಪ್ ಬರೀ ರೈಸ್ ತೆಗೆದುಕೊಳ್ಳುವುದು ಗಮನಿಸಿ, ಬಿರಿಯಾನಿಯೊಟ್ಟಿಗೆ ಕೊಡುವ ಗ್ರೇವಿಯನ್ನು ಉಚಿತವಾಗಿ ಕೊಡಲು ಪ್ರಾರಂಭಿಸಿದರಂತೆ. ಆಗಾಗ್ಗೆ ಒಂದು ಚಿಕನ್ ಪೀಸ್ ಅನ್ನು ಸಹ ಕೊಡುತ್ತಿದ್ದರಂತೆ. ‘ಬಹಳ ಒಳ್ಳೆಯ ವ್ಯಕ್ತಿ, ಆದರೆ ಅವರು ಪ್ರೀತಿಯನ್ನು ಸಹ ಕೋಪದಿಂದಲೇ ತೋರಿಸುತ್ತಿದ್ದರು. ಚಿಕನ್ ಪೀಸ್ ಕೊಟ್ಟರು, ತಗೋ ತಿನ್ನು, ಬೇಗನೆ ತಿಂದು ಮುಗಿಸು’ ಎಂದು ಗಡುಸಾಗಿಯೇ ಹೇಳುತ್ತಿದ್ದರು’ ಎಂದು ನೆನಪಿಸಿಕೊಂಡಿದ್ದರು ಸುದೀಪ್. ಅದೆಲ್ಲ ಅದ್ಭುತವಾದ ದಿನಗಳು. ಅಂದು ನನಗೆ ಅದೆಲ್ಲ ಕಷ್ಟ ಎಂದು ಅನ್ನಿಸಿರಲೇ ಇಲ್ಲ. ಅಂದು ಹಾಗೆ ಬದುಕಿದ್ದಕ್ಕೆ ನಾನು ಹಲವು ಪಾಠಗಳನ್ನು ಕಲಿತೆ, ಹಣದ ಮಹತ್ವ ಅರಿವಾಯ್ತು ಎಂದಿದ್ದರುಸುದೀಪ್.
ತರಗತಿ ರಜಾ ಇದ್ದ ದಿನ, ರೈಲು ಹತ್ತಿ ಜುಹು ಬೀಚ್, ಚರ್ಚ್ ಗೇಟ್ಗೆ ಹೋಗುತ್ತಿದ್ದರಂತೆ. ಅಲ್ಲಿ ಅವರ ಗೆಳೆಯ ಬಾಬು ಸಿಗುತ್ತಿದ್ದರಂತೆ. ಇಬ್ಬರೂ ಸೇರಿ ಭೇಲ್ ಪುರಿ ತೆಗೆದುಕೊಂಡು ಸಮುದ್ರ ನೋಡುತ್ತಾ ಕೂರುತ್ತಿದ್ದರಂತೆ. ಅದಲ್ಲದೆ ಅವರ ರೂಂಗೆ ತುಸು ಹತ್ತಿರದಲ್ಲೇ ಅಮಿತಾಬ್ ಬಚ್ಚನ್ ಮನೆ ‘ಜಲ್ಸಾ’ ಇತ್ತಂತೆ. ತರಗತಿ ಮುಗಿದ ಬಳಿಕ ಸಂಜೆ ವಾಕ್ ಮಾಡುತ್ತಾ ಬಚ್ಚನ್ ಅವರ ಮನೆಯ ಬಳಿ ಹೋಗಿ ಅಮಿತಾಬ್ ಅವರು ಬರುವುದನ್ನೇ ಕಾಯುತ್ತಾ ನಿಲ್ಲುತ್ತಿದ್ದರಂತೆ. ಅಮಿತಾಬ್ ಬಚ್ಚನ್ ನನ್ನ ಜೀವನದ ಮೊದಲ ಸೂಪರ್ ಹೀರೋ, ಅವರು ಹಾಗೂ ಕಿಶೋರ್ ಕುಮಾರ್ ಅವರಿಂದಲೇ ಹಿಂದಿ ಕಲಿತಿರುವುದು ಎಂಬುದು ಸುದೀಪ್ ನಂಬಿಕೆ. ಮುಂಬೈನ ಜನಪ್ರಿಯ ಪೃಥ್ವಿ ಥೀಯೇಟರ್ ಬಳಿ ಹೋಗಿ ಕೂರುತ್ತಿದ್ದರಂತೆ. ಅಲ್ಲಿಗೆ ಬರುವ ದೊಡ್ಡ ನಟರನ್ನು ನೋಡುವುದು ಸುದೀಪ್ಗೆ ಖುಷಿ.
ಇದನ್ನೂ ಓದಿ:ಆಕಾಶದಲ್ಲಿನ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಹೆಸರು; ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೀಗೊಂದು ಗೌರವ
ಸಿನಿಮಾ ಹೀರೋ ಆದ ಬಳಿಕ ಮೊದಲ ಹಿಂದಿ ಸಿನಿಮಾ ಶೂಟಿಂಗ್ಗಾಗಿ ಮುಂಬೈಗೆ ಬಂದಾಗ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸುದೀಪ್ರನ್ನು ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಉಳಿದುಕೊಳ್ಳಲು ಹೇಳುತ್ತಿದ್ದರಂತೆ ಆದರೆ ಸುದೀಪ್ ಮಾತ್ರ ಜೆಡಬ್ಲು ಮ್ಯಾರಿಯೇಟ್ ಎದುರಿಗೆ ಕನ್ನಡಿಗರು ನಡೆಸುತ್ತಿದ್ದ ಹೋಟೆಲ್ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಹೀರೋ ಆಗಿದ್ದರೂ ಸಹ ಆಗ ಜೆಡಬ್ಲು ಮ್ಯಾರಿಯೇಟ್ನಲ್ಲಿ ಉಳಿದುಕೊಳ್ಳುವಷ್ಟು ಸ್ಥಿತಿವಂತನಾಗಿರಲಿಲ್ಲ ಹಾಗಾಗಿ ಅದರ ಎದುರಿಗಿದ್ದ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದೆ. ಆ ಹೋಟೆಲ್ ಸಹ ಚೆನ್ನಾಗಿರುತ್ತಿತ್ತು. ಬೆಂಗಳೂರಿನಿಂದ ಪರಿಚಿತರು ಯಾರೇ ಕರೆ ಮಾಡಿ ಬರುತ್ತೇನೆಂದರೂ ಜೆಡಬ್ಲು ಮ್ಯಾರಿಯೇಟ್ ಅಡ್ರಸ್ ಹೇಳುತ್ತಿದ್ದೆ, ಅವರು ಓಹ್ ಸುದೀಪ್ ಐಶಾರಾಮಿ ಮ್ಯಾರಿಯೇಟ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾನೆ ಎಂದುಕೊಳ್ಳುತ್ತಿದ್ದರು, ಆದರೆ ನಾನು ಉಳಿದುಕೊಳ್ಳುತ್ತಿದ್ದು ಸಾಮಾನ್ಯ ಹೋಟೆಲ್ನಲ್ಲಿ ಎಂದಿದ್ದರು ಸುದೀಪ್.
‘ಮುಂಬೈನಲ್ಲಿ ಸಾಕಷ್ಟು ಸುತ್ತಾಡಿದ್ದೇನೆ. ಇಲ್ಲಿನ ಬಿರು ಬಿಸಿಲು, ವಿಪರೀತ ಮಳೆ ಎಲ್ಲವನ್ನೂ ನೋಡಿದ್ದೇನೆ. ಇಲ್ಲಿನ ಜನ ಒಳ್ಳೆಯವರು, ಪ್ರೀತಿಯನ್ನು ತುಸು ಕೋಪದಿಂದಲೇ ತೋರಿಸುತ್ತಾರೆ. ಆಗ ನನಗೆ ಇಲ್ಲಿ ಗೆಳೆಯರು ಯಾರೂ ಇರಲಿಲ್ಲ. ಆದರೆ ಈಗ ಸಲ್ಮಾನ್ ಖಾನ್ ಸೇರಿದಂತೆ ಹಲವು ಗೆಳೆಯರಿದ್ದಾರೆ. ಈಗ ಆಗಾಗ್ಗೆ ಮುಂಬೈಗೆ ಬರುತ್ತಲೇ ಇರುತ್ತೇನೆ. ಬಂದಾಗೆಲ್ಲ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇನೆ’ ಎಂದು ಹಳೆಯ ಸಂದರ್ಶನದಲ್ಲಿ ಸುದೀಪ್ ನೆನಪು ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 1 September 23