AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಂಗ್ ಕೊಟ್ಟರೂ ಸಹ ಧನ್ವೀರ್ ಬಗ್ಗೆ ಪ್ರೀತಿಯ ಮಾತಾಡಿದ ಕಿಚ್ಚ

Kichcha Sudeep movie: ದರ್ಶನ್ ಆಪ್ತ ಧನ್ವೀರ್ ಸಹ ‘ಕಾಡಲ್ಲಿ ಎಲ್ಲ ಪ್ರಾಣಿಗಳಿರುತ್ತವೆ ಆದರೆ ಸಿಂಹವೇ ರಾಜ’ ಎಂದೆಲ್ಲ ದರ್ಶನ್ ಪರವಾಗಿ ಟ್ವೀಟ್ ಮಾಡಿ, ಸುದೀಪ್ ಅವರನ್ನು ತಗ್ಗಿಸಿ ತೋರಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಸುದೀಪ್ ಆಪ್ತ ವಿನಯ್ ಸಹ ಸರಿಯಾಗಿಯೇ ಕೌಂಟರ್ ಕೊಟ್ಟರು. ಆದರೆ ಸುದೀಪ್ ಅವರು ಧನ್ವೀರ್ ಬಗ್ಗೆ ಪ್ರೀತಿಯಿಂದಲೇ ಮಾತನಾಡಿ ದೊಡ್ಡತನ ಪ್ರದರ್ಶಿಸಿದ್ದಾರೆ.

ಟಾಂಗ್ ಕೊಟ್ಟರೂ ಸಹ ಧನ್ವೀರ್ ಬಗ್ಗೆ ಪ್ರೀತಿಯ ಮಾತಾಡಿದ ಕಿಚ್ಚ
Sudeep Dhanveer
ಮಂಜುನಾಥ ಸಿ.
|

Updated on: Dec 26, 2025 | 5:49 PM

Share

ಸುದೀಪ್ (Sudeep) ಒಳ್ಳೆಯ ನಟ ಮಾತ್ರವಲ್ಲ, ಜವಾಬ್ದಾರಿಯುತ, ಸೆನ್ಸಿಬಲ್ ವ್ಯಕ್ತಿ ಸಹ ಹೌದು. ಇತ್ತೀಚೆಗೆ ಪೈರಸಿ ಬಗ್ಗೆ ಸುದೀಪ್ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದಕ್ಕೆ ತುಪ್ಪ ಸುರಿದು ಬೆಂಕಿಯನ್ನು ಕಾಡ್ಗಿಚ್ಚು ಮಾಡುವ ಪ್ರಯತ್ನವನ್ನು ಕೆಲವರು ಮಾಡಿದರು. ಆದರೆ ಅದನ್ನೆಲ್ಲ ಸುದೀಪ್ ಜಾಣತನದಿಂದಲೇ ಹ್ಯಾಂಡಲ್ ಮಾಡಿದ್ದು, ಆ ಹೇಳಿಕೆ ಬಳಿಕ ಹಲವು ಸಂದರ್ಶನಗಳನ್ನು ನೀಡಿ ಪ್ರತಿ ಸಂದರ್ಶನದಲ್ಲೂ ಜವಾಬ್ದಾರಿಯುತವಾಗಿ ಮಾತನಾಡಿ, ವಿವಾದವನ್ನು ಭುಗಿಲೇಳಲು ಬಿಡದಂತೆ ಜವಾಬ್ದಾರಿಯುತ ವರ್ತನೆ ತೋರಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಯುವನಟರ ಬಗ್ಗೆಯೂ ಪ್ರೀತಿ, ಕರುಣೆಯಿಂದಲೇ ಮಾತನಾಡಿದ್ದಾರೆ ಸುದೀಪ್. ಆ ಮೂಲಕ ದೊಡ್ಡತನ ತೋರಿದ್ದಾರೆ.

ಸುದೀಪ್ ಅವರು ಹುಬ್ಬಳ್ಳಿಯಲ್ಲಿ ಪೈರಸಿ ವಿರುದ್ಧ ಯುದ್ಧದ ಮಾತನಾಡಿದ್ದನ್ನು ದರ್ಶನ್ ಅಭಿಮಾನಿಗಳು ವೈಯಕ್ತಿಕವಾಗಿ ಪರಿಗಣಿಸಿ ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಪೋಸ್ಟ್​​ಗಳನ್ನು ಹಂಚಿಕೊಂಡರು. ಅದೇ ಸಮಯಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ತಮ್ಮ ಹೇಳಿಕೆ ಮೂಲಕ ವಿವಾದ ಇನ್ನಷ್ಟು ಹೆಚ್ಚಾಗುವಂತೆ ಮಾಡಿದರು. ದರ್ಶನ್ ಆಪ್ತ ಧನ್ವೀರ್ ಸಹ ‘ಕಾಡಲ್ಲಿ ಎಲ್ಲ ಪ್ರಾಣಿಗಳಿರುತ್ತವೆ ಆದರೆ ಸಿಂಹವೇ ರಾಜ’ ಎಂದೆಲ್ಲ ದರ್ಶನ್ ಪರವಾಗಿ ಟ್ವೀಟ್ ಮಾಡಿ, ಸುದೀಪ್ ಅವರನ್ನು ತಗ್ಗಿಸಿ ತೋರಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಸುದೀಪ್ ಆಪ್ತ ವಿನಯ್ ಸಹ ಸರಿಯಾಗಿಯೇ ಕೌಂಟರ್ ಕೊಟ್ಟರು.

ಇದನ್ನೂ ಓದಿ:ಅಭಿಮಾನಿಗಳ ಸಂಭ್ರಮನ ಕಣ್ತುಂಬಿಕೊಂಡ ಸುದೀಪ್

ಇದೇ ವಿಷಯವಾಗಿ ಸುದೀಪ್ ಅವರಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎದುರಾಗಿದೆ. ಉತ್ತರ ನೀಡಿರುವ ಸುದೀಪ್, ‘ಧನ್ವೀರ್, ವಿನಯ್ ಎಲ್ಲರೂ ನನಗೆ ಒಂದೇ. ಅವರೆಲ್ಲ ನಮ್ಮ ಚಿತ್ರರಂಗದ ಯುವ ನಟರು. ಅವರೆಲ್ಲ ಕೆಲವು ವಿಷಯಗಳನ್ನು ಬಿಡಬೇಕಾಗುತ್ತೆ, ನಾನು ಧನ್ವೀರ್ ಅವರನ್ನು ನೋಡಿದ್ದೀನಿ, ಅವರು ಹೇಗೆ ಓಡಾಡುತ್ತಿದ್ದಾರೆ. ನಾನು ಅದನ್ನು ಮೆಚ್ಚಿಕೊಳ್ಳುತ್ತೀನಿ’ ಎಂದಿದ್ದಾರೆ ಸುದೀಪ್.

ಮುಂದುವರೆದು, ‘ಒಬ್ಬ ಹೀರೋ ಜೊತೆಗೆ ನೀವಿರಬೇಕಾದರೆ, ಅವರು ನಿಮ್ಮನ್ನು ಇಷ್ಟ ಪಡಬೇಕಾದರೆ ಆ ನಿಯತ್ತು, ಲಾಯಲ್ಟಿ, ಆ ಪ್ರೀತಿ ಇರಬೇಕು. ಅದು ಏನಾದರೂ ಆಗಲಿ, ನಾನು ನಮ್ಮ ಹೀರೋ ಜೊತೆಗೆ ನಿಂತುಕೊಳ್ಳುತ್ತೀನಿ ಎಂಬ ಅವರ ಹಠ ಹಿಡಿಸಿತು’ ಎಂದಿದ್ದಾರೆ ನಟ ಸುದೀಪ್. ಆ ಮೂಲಕ ತಮಗೆ ಪರೋಕ್ಷ ಟಾಂಗ್ ಕೊಡುವ ಪ್ರಯತ್ನ ಮಾಡಿದ ಕಿರಿ ನಟನ ಬಗ್ಗೆಯೂ ಪ್ರಶಂಸಾತ್ಮಕ ಮಾತುಗಳನ್ನೇ ಆಡಿ ದೊಡ್ಡತನ ಪ್ರದರ್ಶಿಸಿದ್ದಾರೆ ಕಿಚ್ಚ.

ಸುದೀಪ್ ಅವರು ಧನ್ವೀರ್ ಬಗ್ಗೆ ಆಡಿರುವ ಮಾತುಗಳನ್ನು ಸ್ವತಃ ದರ್ಶನ್ ಅಭಿಮಾನಿಗಳು, ಧನ್ವೀರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ. ತಮ್ಮ ತೂಕದ ಮಾತುಗಳಿಂದ ವಿರೋಧಿಗಳ ಮನಸ್ಸನ್ನೂ ಗೆದ್ದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ