ಸುದೀಪ್ ಅಭಿಮಾನಿಗಳಿಗೆ ‘ಮ್ಯಾಕ್ಸಿಮಮ್ ಖುಷಿ’, ಹೊಸ ಸಿನಿಮಾ ಘೋಷಿಸಲಿರುವ ಕಿಚ್ಚ

Kichcha Sudeep: ಕನ್ನಡದಲ್ಲಿ ಸ್ಟಾರ್ ನಟರುಗಳು ಒಂದರ ಹಿಂದೊಂದು ಸಿನಿಮಾ ಮಾಡುತ್ತಿಲ್ಲ ಎಂಬ ದೂರು ಇದೆ. ಆದರೆ ಸುದೀಪ್ ಅವರು ಈ ನಿಟ್ಟಿನಲ್ಲಿ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಹೊಸದೊಂದು ಸಿನಿಮಾ ಘೋಷಿಸಲು ಮುಂದಾಗಿದ್ದಾರೆ. ತಮಗೆ ಹಿಟ್ ಕೊಟ್ಟ ನಿರ್ದೇಶಕನ ಜೊತೆಗೆ ಮತ್ತೊಮ್ಮೆ ಸಿನಿಮಾ ಮಾಡಲಿದ್ದಾರೆ ಕಿಚ್ಚ.

ಸುದೀಪ್ ಅಭಿಮಾನಿಗಳಿಗೆ ‘ಮ್ಯಾಕ್ಸಿಮಮ್ ಖುಷಿ’, ಹೊಸ ಸಿನಿಮಾ ಘೋಷಿಸಲಿರುವ ಕಿಚ್ಚ
Kichcha Sudeep

Updated on: Jul 03, 2025 | 8:01 AM

ಕನ್ನಡದ ಸ್ಟಾರ್ ನಟರುಗಳು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ ಎಂಬ ದೂರು ನಿರ್ಮಾಪಕರು, ವಿತರಕರು, ಪ್ರದರ್ಶಕರ ಜೊತೆಗೆ ಸಿನಿಮಾ ಪ್ರೇಮಿಗಳಿಂದಲೂ ಕೇಳಿ ಬರುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾ ಒಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ತಿಂಗಳುಗಳೇ ಕಳೆದು ಹೋಗಿವೆ. ಯಾರೂ ಹೊಸ ಸಿನಿಮಾಗಳನ್ನು ಘೋಷಿಸುತ್ತಿಲ್ಲ. ಇದರ ನಡುವೆ ಕಿಚ್ಚ ಸುದೀಪ್ (Kichcha Sudeep) ಇದೀಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ. ಅದೂ ಇತ್ತೀಚೆಗಷ್ಟೆ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕರೊಬ್ಬರ ಜೊತೆಗೆ ಸಿನಿಮಾ ಘೋಷಿಸಲು ಕಿಚ್ಚ ಮುಂದಾಗಿದ್ದಾರೆ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡ ಈ ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿತ್ತು. ಎಲ್ಲಿಯೂ ಬೋರ್ ಹೊಡೆಸದೆ, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂಡಿಸಿದ್ದ ಸಿನಿಮಾ ಇದು. ಸುದೀಪ್ ತಮ್ಮ ಅದ್ಭುತ ನಟನೆ, ಆಕ್ಷನ್, ಡೈಲಾಗ್​ಗಳಿಂದ ಪ್ರೇಕ್ಷಕರನ್ನು ಖುಷಿ ಪಡಿಸಿದ್ದರು. ಇದೀಗ ಇದೇ ಸಿನಿಮಾದ ನಿರ್ದೇಶಕರ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ ಕಿಚ್ಚ ಸುದೀಪ್.

ಹೌದು, ‘ಮ್ಯಾಕ್ಸ್’ ಸಿನಿಮಾ ಅನ್ನು ತಮಿಳಿನ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಇದು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ ಮೊದಲ ಸಿನಿಮಾ ಆಗಿತ್ತು. ಮೊದಲ ಸಿನಿಮಾದಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ ವಿಜಯ್. ‘ಮ್ಯಾಕ್ಸ್’ ಸಿನಿಮಾವನ್ನು ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಸುದೀಪ್ ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಇದೀಗ ಸುದೀಪ್ ಅವರು ವಿಜಯ್ ಕಾರ್ತಿಕೇಯ ಜೊತೆಗೆ ಹೊಸ ಸಿನಿಮಾ ಘೋಷಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಸುದೀಪ್, ಧ್ರುವ, ದರ್ಶನ್ ಅಭಿಮಾನಿಗಳ ಬಳಿ ಯಶ್ ತಾಯಿ ಮನವಿ

ಜುಲೈ 5 ರಂದು ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಅವರ ನಟನೆಯ ಹೊಸ ಸಿನಿಮಾದ ಘೋಷಣೆ ಆಗಲಿದೆ. ಇದು ‘ಮ್ಯಾಕ್ಸ್’ ಸಿನಿಮಾದ ಮುಂದುವರೆದ ಭಾಗವೇ ಆಗಿರಲಿದೆ ಎಂಬ ಸುದ್ದಿ ಇದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಇದ್ದ ಹಲವು ಪಾತ್ರಗಳು ಹೊಸ ಸಿನಿಮಾದಲ್ಲಿಯೂ ಇರಲಿವೆ ಎನ್ನಲಾಗುತ್ತಿದೆ. ಜುಲೈ 5ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.

ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅನುಪ್ ಭಂಡಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ತಿಂಗಳುಗಳಾಗಿವೆ. ಇದರ ಜೊತೆಗೆ ಕೆವಿಎನ್ ಪ್ರೊಡಕ್ಷನ್​ನ ಒಂದು ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ. ಆ ಸಿನಿಮಾ ಘೋಷಣೆಯಾಗಿದೆ ಆದರೆ ಸಿನಿಮಾದ ಚಿತ್ರೀಕರಣ ಇನ್ನೂ ಆರಂಭ ಆದಂತಿಲ್ಲ. ತಮಿಳಿನ ಸ್ಟಾರ್ ನಿರ್ದೇಶಕ ಚೇರನ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದರ ಜೊತೆಗೆ ಸುದೀಪ್ ಮತ್ತೊಮ್ಮೆ ನಿರ್ದೇಶನಕ್ಕೆ ಕೈ ಹಾಕಲಿದ್ದಾರೆ ಎಂಬ ಸುದ್ದಿಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ