
ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಶೂಟಿಂಗ್ ಭರದಿಂದ ಸಾಗಿದೆ. ಭರ್ಜರಿ ಆಕ್ಷನ್ ಸಿನಿಮಾ ಅನ್ನು ಪ್ರೇಮ್ ತೆರೆಗೆ ತರುವ ಪ್ರಯತ್ನದಲ್ಲಿದ್ದು, ಈಗಾಗಲೇ ಬಿಡುಗಡೆ ಆಗಿರುವ ಟೀಸರ್ನಲ್ಲಿ ರಕ್ತದ ಓಕುಳಿಯನ್ನೇ ಹರಿಸಿದ್ದಾರೆ. ಧ್ರುವ ಸರ್ಜಾ ನಾಯಕರಾಗಿರುವ ಈ ಸಿನಿಮಾದಲ್ಲಿ ಹಲವು ದೊಡ್ಡ ಸ್ಟಾರ್ಗಳನ್ನು ಅತಿಥಿ ಪಾತ್ರಗಳಿಗೆ ಹಾಕಿಕೊಂಡಿದ್ದು, ಇದೀಗ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಸುದೀಪ್ ಅವರು ಸಹ ‘ಕೆಡಿ’ಗೆ ಕೈಜೋಡಿಸಿದಂತಿದೆ.
ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ರೈಲಿನ ಸೆಟ್ ಹಾಕಿ ಆಕ್ಷನ್ ದೃಶ್ಯದ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಸಿನಿಮಾ ಸೆಟ್ಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ಸಿನಿಮಾದ ಅತಿಥಿ ಪಾತ್ರದಲ್ಲಿ ಕಿಚ್ಚ ನಟಿಸಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಸುದೀಪ್ ಅವರು ಈ ಹಿಂದೆ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾನಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಿರಲಿಲ್ಲ. ಇದೀಗ ಹಲವು ಸ್ಟಾರ್ ನಟ-ನಟಿಯರನ್ನು ಗುಡ್ಡೆ ಹಾಕಿಕೊಂಡು ಪ್ರೇಮ್ ಅವರು ‘ಕೆಡಿ’ ಸಿನಿಮಾ ಮಾಡುತ್ತಿದ್ದು, ಧ್ರುವ ಸರ್ಜಾ ಪಾಲಿಗೆ ಇದು ಮಹತ್ವದ ಸಿನಿಮಾ ಆಗಿದೆ. ಧ್ರುವ ಸರ್ಜಾ, ಸುದೀಪ್ ಅವರ ಆಪ್ತ ನಟ ಆಗಿರುವ ಕಾರಣ, ಇದೀಗ ಸುದೀಪ್ ‘ಕೆಡಿ’ ಸಿನಿಮಾನಲ್ಲಿ ಮಹತ್ವದ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಚಿತ್ರತಂಡದಿಂದ ಹೊರಬೀಳಬೇಕಿದೆ.
ಇದನ್ನೂ ಓದಿ:ಎಷ್ಟೇ ನೆಗೆಟಿವ್ ಕಮೆಂಟ್ ಬಂದರೂ ತಲೆ ಕೆಡಿಸಿಕೊಂಡಿಲ್ಲ ಅನ್ವೇಶಿ ಜೈನ್
‘ಕೆಡಿ’ ಸಿನಿಮಾ 80ರ ದಶಕದ ರೌಡಿಸಂ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟ, ‘ಕೆಜಿಎಫ್’ ಅಧೀರ ಖ್ಯಾತಿಯ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾನಲ್ಲಿ ಬಾಲಿವುಡ್ ಬೆಡಗಿ, ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾಗಿರುವ ಶಿಲ್ಪಾ ಶೆಟ್ಟಿ ಸಹ ನಟಿಸುತ್ತಿದ್ದಾರೆ. ರೇಷ್ಮಾ ನಾಣಯ್ಯ ಸಿನಿಮಾದ ನಾಯಕಿ. ರವಿಚಂದ್ರನ್, ರಮೇಶ್ ಅರವಿಂದ್ ಹಾಗೂ ಅಭಿಜಿತ್ ಅವರುಗಳು ಹಿಂದೆಂದೂ ಕಾಣದಿದ್ದ ರೀತಿಯ ರಫ್ ಪಾತ್ರದಲ್ಲಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಮೋಹನ್ಲಾಲ್ ಸಹ ಇದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಐಟಂ ಹಾಡಿಗೆ ನೋರಾ ಫತೇಹಿ ಸೊಂಟ ಕುಣಿಸಿದ್ದಾರೆ. ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ