
ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಸಿನಿಮಾನಲ್ಲಿ ನಟಿಸುವ ಜೊತೆಗೆ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದಾರೆ ನಟ ಸುದೀಪ್. ಅಂದಹಾಗೆ ಈ ಸಿನಿಮಾ ಮೂಲಕ ಸುದೀಪ್ ಅವರ ಪುತ್ರಿ ಸಾನ್ವಿ ಮತ್ತು ಸುದೀಪ್ ಅವರ ಪತ್ನಿ ಪ್ರಿಯಾ ಅವರು ವಿತರಕಿಯರಾಗುತ್ತಿದ್ದಾರೆ. ಸುದೀಪ್ ಅವರ ಪುತ್ರಿ ಹಾಡುಗಾರ್ತಿಯಾಗಿದ್ದು, ಒಂದೆರಡು ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆದರೆ ಇದೀಗ ತಂದೆಯ ಸಿನಿಮಾ ಮೂಲಕ ವಿತರಣೆ ಜವಾಬ್ದಾರಿಯನ್ನೂ ಸಹ ಹೆಗಲಿಗೆತ್ತಿಕೊಳ್ಳುತ್ತಿದ್ದಾರೆ.
ಡಿಸೆಂಬರ್ 25 ರಂದು ಬಿಡುಗಡೆ ಆಗುತ್ತಿರುವ ‘ಮಾರ್ಕ್’ ಸಿನಿಮಾವನ್ನು ಕರ್ನಾಟಕದಲ್ಲಿ ಕೆಆರ್ಜಿ ವಿತರಣೆ ಮಾಡುತ್ತಿದೆ. ಆದರೆ ಅದರ ಜೊತೆಗೆ ಸಾನ್ವಿ ಅವರು ಸಹ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ (ಪ್ರಿಯಾ ಮತ್ತು ಸಾನ್ವಿ) ಹೆಸರಿನ ಸಂಸ್ಥೆ ಮೂಲಕ ವಿತರಣೆ ಮಾಡಲಿದ್ದಾರೆ. ಸುದೀಪ್ ಅವರು ಸಹ ನಿರ್ಮಾಪಕ ಆಗಿರುವ ಕಾರಣ, ಸಾನ್ವಿ ಅವರಿಗೆ ವಿತರಣೆ ಸುಲಭವಾಗುವ ಸಾಧ್ಯತೆ ಇದೆ. ಸಾನ್ವಿ ಅವರು ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಇಳಿದರೂ ಆಶ್ಚರ್ಯ ಇಲ್ಲ.
ಇದನ್ನೂ ಓದಿ:ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಸಾನ್ವಿ ಅವರು ತೆಲುಗಿನಲ್ಲಿ ನಟ ನಾನಿ ನಟಿಸಿರುವ ‘ಹಿಟ್ 3’ ಸಿನಿಮಾಕ್ಕೆ ಹಾಡೊಂದಕ್ಕೆ ದನಿ ನೀಡಿದ್ದರು. ಇದೀಗ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಮಲೈಕಾ ಹಾಡನ್ನು ಸಹ ಹಾಡಿದ್ದಾರೆ. ಇನ್ನೂ ಸುದೀಪ್ ಅವರ ಸಹೋದರಿಯ ಪುತ್ರನ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಆ ಸಿನಿಮಾನಲ್ಲೂ ಸಾನ್ವಿ ಹಾಡಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ, ‘ಮ್ಯಾಂಗೊ ಪಚ್ಚ’ ಸಿನಿಮಾವನ್ನೂ ಸಹ ಸಾನ್ವಿ ಅವರು ಸುಪ್ರಿಯಾನ್ವಿ ಸ್ಟುಡಿಯೋಸ್ ಮೂಲಕ ವಿತರಣೆ ಮಾಡುವ ಸಾಧ್ಯತೆ ಇದೆ. ಒಟ್ಟಾರೆ ಚಿತ್ರರಂಗದಲ್ಲಿಯೇ ನೆಲೆ ನಿಲ್ಲುವ ಸುಳಿವನ್ನು ಸಾನ್ವಿ ಸುದೀಪ್ ಅವರು ನೀಡಿದ್ದಾರೆ. ಅವರಿಗೆ ತಂದೆಯ ಮಾರ್ಗದರ್ಶನವೂ ಇದೆ.
ಇನ್ನು ಸುದೀಪ್ ನಟಿಸಿರುವ ‘ಮಾರ್ಕ್’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೆ ಬೇರೆ ಕೆಲ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಅನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಮ್ಯಾಕ್ಸ್’ ಸಿನಿಮಾವನ್ನೂ ಸಹ ಅವರೇ ನಿರ್ದೇಶನ ಮಾಡಿದ್ದರು. ‘ಮಾರ್ಕ್’ ಸಿನಿಮಾಕ್ಕೆ ಸುದೀಪ್ ಮತ್ತು ಸತ್ಯಜ್ಯೋತಿ ಫಿಲಮ್ಸ್ ಬಂಡವಾಳ ಹೂಡಿದೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾನಲ್ಲಿ ಯೋಗಿ ಬಾಬು, ಶೈನ್ ಟಾಮ್ ಚಾಕೊ, ನವೀನ್ ಚಂದ್ರ ಅಂಥಹ ಪ್ರತಿಭಾವಂತ ಕಲಾವಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ