ಕನ್ನಡ ಚಿತ್ರರಂಗದಲ್ಲಿ ಶಿವರಾಜ್ಕುಮಾರ್ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿ. ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈ ಮಹಾನ್ ಕಲಾವಿದರು ಬಳಿಕ ಸ್ಯಾಂಡಲ್ವುಡ್ನಲ್ಲಿ ಮಾಡಿದ್ದು ದೊಡ್ಡ ಸಾಧನೆ. ನಾಯಕ-ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ‘ಆನಂದ್’. 1986ರಲ್ಲಿ ತೆರೆಕಂಡ ಆ ಚಿತ್ರಕ್ಕೀಗ 35 ವರ್ಷ ತುಂಬಿದೆ. ಅದನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಸುಧಾರಾಣಿ ಅವರಿಗೆ ಈ ಸಿನಿಮಾದಿಂದ ಚಿತ್ರರಂಗದಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿತ್ತು. ಡಾ. ರಾಜ್ಕುಮಾರ್ ಪುತ್ರನ ಮೊದಲ ಚಿತ್ರಕ್ಕೆ ಹೀರೋಯಿನ್ ಆಗುವುದು ಎಂದರೆ ತಮಾಷೆಯ ಮಾತಲ್ಲ. ಅಂತಹ ಸುವರ್ಣ ಅವಕಾಶ ಅವರಿಗೆ ಒದಗಿಬಂದಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸುಧಾರಾಣಿ ಅವರು ನಂತರ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಮೆರೆದರು. ಈಗ ‘ಆನಂದ್’ ಚಿತ್ರ 35 ವಸಂತಗಳನ್ನು ಪೂರೈಸಿರುವುದಕ್ಕೆ ಸುಧಾರಾಣಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ವಿಶೇಷ ಎಂದರೆ, ಆಗಿನ್ನೂ ಸುಧಾರಾಣಿ ಅವರ ಹೆಸರು ಜಯಶ್ರೀ ಆಗಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೆಲವು ಲೇಖನಗಳಲ್ಲೂ ಅವರ ಹೆಸರನ್ನು ಜಯಶ್ರೀ ಎಂದೇ ಬರೆಯಲಾಗುತ್ತಿತ್ತು. ಆನಂದ್ ಸಿನಿಮಾದಿಂದಾಗಿ ಅವರು ಸುಧಾರಾಣಿಯಾಗಿ ಬದಲಾದರು. ಚಿತ್ರಕ್ಕಾಗಿ ಶಿವರಾಜ್ಕುಮಾರ್ ಜೊತೆ ಮಾಡಿಸಿದ್ದ ಫೋಟೋಶೂಟ್, ಶೂಟಿಂಗ್ ಸಮಯದ ಫೋಟೋ, ಶತದಿನೋತ್ಸವ ಸಂಭ್ರಮದ ಪೋಸ್ಟರ್, ಆಹ್ವಾನ ಪತ್ರಿಕೆ ಹಾಗೂ ಸೋಲೋ ಫೋಟೋಶೂಟ್ ಮುಂತಾದ್ದನ್ನು ಸುಧಾರಾಣಿ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.
‘1986ರ ಜೂನ್ 19. ನನ್ನ ಜೀವನದ ಬಹುಮುಖ್ಯ ದಿನ. ಆನಂದ್ ಸಿನಿಮಾ ತೆರೆಕಂಡು 35 ವರ್ಷ ಕಳೆಯಿತು. ಇದು ಸಾಧ್ಯವಾಗಲು ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಮೊದಲ ದಿನದ ಶೂಟಿಂಗ್ನಿಂದ 100 ದಿನಗಳ ಸಮಾರಂಭದವರೆಗಿನ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಇನ್ಸ್ಟಗ್ರಾಮ್ನಲ್ಲಿ ಸುಧಾರಾಣಿ ಬರೆದುಕೊಂಡಿದ್ದಾರೆ.
ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷ ಆಯಿತು ಎಂದು ‘ಹ್ಯಾಟ್ರಿಕ್ ಹೀರೋ’ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆನಂದ್ ಚಿತ್ರದ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಲಾಗುತ್ತಿದೆ. ‘ಆನಂದ್’ ಚಿತ್ರಕ್ಕೆ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಪಕಿ ಆಗಿದ್ದರು. ರಾಜೇಶ್, ತಾರಾ, ಜಯಂತಿ, ತೂಗುದೀಪ ಶ್ರೀನಿವಾಸ್ ಮುಂತಾದವರು ಸಹ ನಟಿಸಿದ್ದರು.
ಇದನ್ನೂ ಓದಿ: