ಅಂಬರೀಷ್ ಬದುಕಿದ್ದರೆ ಇಂದು 69ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅಂಬಿ ಮೃತಪಟ್ಟ ನಂತರವೂ ಪ್ರತೀ ಮೇ 29ರಂದು ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ. ಆದರೆ, ಈಗ ಪರಿಸ್ಥಿತಿ ಹದಗೆಟ್ಟಿದೆ. ಕೊವಿಡ್ ಕಾರಣದಿಂದ ಜನರು ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಬೇಡ ಎಂದು ಅಭಿಮಾನಿಗಳ ಬಳಿ ಅಂಬರೀಷ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ.
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ. #staysafe’ ಎಂದು ಬರೆದುಕೊಂಡಿದ್ದಾರೆ.
ಇನ್ನು, ಅಂಬರೀಷ್ ಜನ್ಮದಿನದ ಅಂಗವಾಗಿ ಸುಮಲತಾ ಸಾಕಷ್ಟು ಜನಪರ ಕೆಲಸ ಮಾಡುತ್ತಿದ್ದಾರೆ. ಮೊದಲು ಅವರು ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಷ್ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ನಂತರ ಅಂಬರೀಷ್ ಹುಟ್ಟೂರು ಮಂಡ್ಯಕ್ಕೆ ತೆರಳಲಿದ್ದು, ಅಲ್ಲಿ ಕೆಲವು ಜನಪರ ಕೆಲಸ ಮಾಡಲಿದ್ದಾರೆ.
ಇದನ್ನೂ ಓದಿ: ಅಂಬರೀಷ್ ಜನ್ಮದಿನ; ಸಂಸದೆ ಸುಮಲತಾ ಅಂಬರೀಷ್ ಮಾಡುವ ಕೆಲಸಗಳೇನು?
ಅಂಬರೀಷ್ ಇಲ್ಲದೆ ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು; ಭಾವುಕರಾದ ಸುಮಲತಾ ಅಂಬರೀಷ್
Published On - 9:20 pm, Fri, 28 May 21