ಅಂಬರೀಷ್ 69ನೇ ಜನ್ಮದಿನ; ರೆಬೆಲ್ ಸ್ಟಾರ್ ನೆನಪು ಹಂಚಿಕೊಂಡು ದರ್ಶನ್-ಸುದೀಪ್ ವಿಶ್ ಮಾಡಿದ್ದು ಹೇಗೆ?
Ambareesh Birthday: ಅಂಬರೀಷ್ ಬಗ್ಗೆ ದರ್ಶನ್ ಮತ್ತು ಸುದೀಪ್ಗೆ ಅಪಾರ ಗೌರವ. ರೆಬೆಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಈ ಸ್ಟಾರ್ ನಟರಿಬ್ಬರು ವಿಶ್ ಮಾಡಿದ್ದಾರೆ. ಕೊವಿಡ್ ಕಾರಣದಿಂದ ಸಾರ್ವಜನಿಕವಾಗಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ.
ಇಂದು (ಮೇ 29) ರೆಬಲ್ ಸ್ಟಾರ್ ಅಂಬರೀಷ್ ಅವರ 69ನೇ ಜನ್ಮದಿನ. ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಇಂದು ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಕೊವಿಡ್ ಹಾವಳಿ ಹೆಚ್ಚಿರುವುದರಿಂದ ಸೋಶಿಯಲ್ ಮೀಡಿಯಾ ಮೂಲಕವೇ ಶುಭ ಕೋರಲಾಗುತ್ತಿದೆ. ಅಂಬರೀಷ್ ಜೊತೆ ಆಪ್ತ ಒಡನಾಟ ಹೊಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ರೆಬಲ್ ಸ್ಟಾರ್ ಬರ್ತ್ಡೇಗೆ ವಿಶ್ ಮಾಡಿದ್ದಾರೆ.
ಅಂಬರೀಷ್ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋವನ್ನು ದರ್ಶನ್ ಹಂಚಿಕೊಂಡಿದ್ದಾರೆ. ‘ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಕುರುಕ್ಷೇತ್ರ, ಅಂಬರೀಶ, ಬುಲ್ಬುಲ್ ಮುಂತಾದ ಸಿನಿಮಾಗಳಲ್ಲಿ ದರ್ಶನ್ ಮತ್ತು ಅಂಬರೀಷ್ ಜತೆಯಾಗಿ ನಟಿಸಿದ್ದರು.
ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು @sumalathaA pic.twitter.com/r8jrJarA0v
— Darshan Thoogudeepa (@dasadarshan) May 29, 2021
ಕಿಚ್ಚ ಸುದೀಪ್ ಕೂಡ ಅಂಬರೀಷ್ ಅವರು ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ‘ನಿಮ್ಮನ್ನು ನಿಜಕ್ಕೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಮಾಮ’ ಎಂದು ಅವರು ಅಂಬರೀಷ್ಗೆ ಜನ್ಮದಿನದ ಶುಭ ಕೋರಿದ್ದಾರೆ. ವೀರ ಪರಂಪರೆ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಗಳಲ್ಲಿ ಸುದೀಪ್ ಮತ್ತು ಅಂಬರೀಷ್ ಜೊತೆಯಾಗಿ ಕೆಲಸ ಮಾಡಿದ್ದರು.
You are TRUELY missed Mama. ??????♥️?????? pic.twitter.com/2IFomjLwsE
— Kichcha Sudeepa (@KicchaSudeep) May 29, 2021
ಅಂಬರೀಷ್ ಜನ್ಮದಿನದ ಪ್ರಯುಕ್ತ ಇಂದು ಸಂಸದೆ ಸುಮಲತಾ ಅಂಬರೀಷ್ ಅವರು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಷ್ ಸಮಾಧಿಗೆ ಅವರು ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಿದ್ದಾರೆ.
ಎಲ್ಲವೂ ಸುಸ್ಥಿತಿಯಲ್ಲಿದ್ದರೆ ಅಂಬಿ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅನ್ನಸಂತರ್ಪಣೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಅಂಬಿ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರ್ಕಾರ ಕೊವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಿದೆ. ಯಾರೊಬ್ಬರೂ ಮನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯಾರೂ ಅಂಬರೀಷ್ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ಸುಮಲತಾ ಹೇಳಿದ್ದಾರೆ.
‘ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನೆ-ಮನಗಳಲ್ಲೇ ಆಚರಿಸೋಣ’ ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
ಅಂಬರೀಷ್ ಎಲ್ಲಿಯೂ ಹೋಗಿಲ್ಲ, ಅವರು ನಮ್ಮ ಜತೆಯೇ ಇದ್ದಾರೆ; ಸುಮಲತಾ ಭಾವುಕ ನುಡಿ
ಅಂಬರೀಷ್ ಇಲ್ಲದೆ ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು; ಭಾವುಕರಾದ ಸುಮಲತಾ ಅಂಬರೀಷ್