ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್
Bigg Boss Kannada: ಬಿಗ್ಬಾಸ್ ಮನೆಯ ಚಿನ್ನದ ಹುಡುಗ ಗೋಲ್ಡ್ ಸುರೇಶ್ ಅವರು ತಮ್ಮ ಕೊರಳಿನಲ್ಲಿರುವ ಲಕ್ಷಾಂತರ ಬೆಲೆಯ ಚಿನ್ನದ ಸರವನ್ನು ಗೆಳೆಯ ಹನುಮಂತನ ಕೊರಳಿಗೆ ಹಾಕಿದ್ದಾರೆ.
ಬಿಗ್ಬಾಸ್ ಸೀಸನ್ 11ರ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ತುಸು ತಮಾಷೆ ಮಾಡುತ್ತಾ, ವಾರದಲ್ಲಿ ನಡೆದ ಘಟನೆಗಳನ್ನು ವಿಶ್ಲೇಷಿಸುತ್ತಾ, ಇತರೆ ಸದಸ್ಯರ ಬಗ್ಗೆ ಮನೆಯ ಸದಸ್ಯರಿಗಿರುವ ಅಭಿಪ್ರಾಯಗಳನ್ನು ಹೊರಗೆ ಎಳೆಯುತ್ತಾ ವಾರದ ಪಂಚಾಯಿತಿಯ ಮೊದಲ ಎಪಿಸೋಡ್ ನಡೆಸಿಕೊಟ್ಟರು. ಬಿಳಿ ಬಣ್ಣದ ಉಡುಗೆ ತೊಟ್ಟು ಬಂದ ಸುದೀಪ್, ಆರಂಭದಲ್ಲಿ ಸ್ಪರ್ಧಿಗಳೊಟ್ಟಿಗೆ ತುಸು ತಮಾಷೆಯಾಗಿ ಮಾತನಾಡಿದರು. ಪ್ರಾರಂಭದಲ್ಲಿ ಗೋಲ್ಡ್ ಸುರೇಶ್ ಹಾಗೂ ಹನುಮಂತು ಅನ್ನು ಚೆನ್ನಾಗಿ ಕಾಲೆಳೆದರು. ಜೊತೆಗೆ ಸುರೇಶ್ ಅವರಿಗೆ ಬುದ್ಧಿವಾದವನ್ನೂ ಸಹ ಹೇಳಿದರು.
ಯಾರೇ ನಾಮಿನೇಟ್ ಮಾಡಿದರೂ ಸುರೇಶ್ ಜಗಳ ಮಾಡುತ್ತಾರೆ ಆದರೆ ಹನುಮಂತು ನಾಮಿನೇಟ್ ಮಾಡಿದರೆ ಜಗಳ ಮಾಡುವುದಿಲ್ಲ ಎಂದು ಚರ್ಚೆ ಆರಂಭವಾಯ್ತು. ಚರ್ಚೆ ಮುಂದುವರೆದು, ಸುರೇಶ್, ಹನುಮಂತನ ಬಗ್ಗೆ ಹೆಚ್ಚು ಪ್ರೀತಿ ಇದೆ ಎಂಬಲ್ಲಿಗೆ ಮಾತು ಬಂತು. ಆಗ ಸುದೀಪ್, ನಿಮ್ಮ ಅಳಿಯನಿಗೆ ನಿಮ್ಮ ಕೊರಳಲ್ಲಿರುವ ಚಿನ್ನದ ಸರ ಹಾಕಿ ನೋಡೋಣ ಎಂದು ತಮಾಷೆಯಾಗಿ ಸವಾಲು ಹಾಕಿದರು.
ಮೊದಲಿಗೆ ಸುರೇಶ್ ತುಸು ಹಿಂಜರಿದರು. ಇದು ತುಂಬಾ ದುಬಾರಿ ಎಂದೆಲ್ಲ ಹೇಳಿದರು. ಬಳಿಕ ಸುದೀಪ್, ತಮಾಷೆಯಿಂದಲೇ ಬದವಂತ ಮಾಡಿದಾಗ ಧೈರ್ಯವಾಗಿ ಎದ್ದ ಸುರೇಶ್, ಹೋಗಿ ಹನುಮಂತನ ಕೊರಳಿಗೆ ಚಿನ್ನದ ಸರ ಹಾಕಿದರು. ಕೊರಳಿಗೆ ಹಾಕಿದ ಮೇಲೆ ಅದನ್ನು ತೆಗೆಯುವಂತಿಲ್ಲ ಎಂದು ಸುರೇಶ್ಗೆ ಸುದೀಪ್ ಹೇಳಿದರು. ಆದರೆ ಹನುಮಂತು, ‘ಬಿಡಿ ಸಾರ್ ಅವರು ಮನಸ್ಸಿನಿಂದ ಹಾಕಿಲ್ಲ, ವಾಪಸ್ ಕೊಟ್ಟುಬಿಡುತ್ತೇನೆ’ ಎಂದರು. ಅಂತೆಯೇ ಸುರೇಶ್ಗೆ ಚೈನನ್ನು ವಾಪಸ್ ಕೊಟ್ಟುಬಿಟ್ಟರು.
ಇದನ್ನೂ ಓದಿ:ಬಿಗ್ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ
ಅದಾದ ಬಳಿಕ ಹನುಮಂತು, ಸುರೇಶ್ ಬಳಿ ತಮಾಷೆಯಾಗಿ ಮಾತನಾಡುತ್ತಾ, ಅವರು ತನಗೆ ಸಾಕ್ಸ್ಗಳನ್ನು ಕೊಡಲು ಅಷ್ಟೋಂದು ಮಾತನಾಡಿದರು. ಈಗ ಚಿನ್ನ ಕೊಟ್ಟುಬಿಡುತ್ತಾರಾ? ಎಂದು ಕೇಳಿದರು. ಇದು ಸುರೇಶ್ಗೆ ತುಸು ಬೇಸರ ತರಿಸಿತು, ಇದನ್ನು ಗಮನಿಸಿದ ಸುದೀಪ್ ಯಾಕೆ ಬೇಜಾರಾಯ್ತು ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸುರೇಶ್, ‘ನಾನು ಕೊಡುವ ವಿಚಾರದಲ್ಲಿ ಧಾರಾಳಿ ಸರ್, ನನ್ನನ್ನು ಹೀಗೆ ಕರೆದಿದ್ದು ಬೇಕಾರಾಯ್ತು. ಕಳೆದ ಬಾರಿ ನೀವು ಸಹ ನನ್ನ ಚಿನ್ನದ ಕಡಗದ ಬಗ್ಗೆ ಮಾತನಾಡಿ, ಅದನ್ನು ಮಾರಿದರೆ ಸಮಾಜ ಸೇವೆ ಮಾಡಬಹುದು ಎಂದಿದ್ದಿರಿ, ಆ ದಿನದಿಂದಲೂ ನಾನು ಕಡಗವನ್ನು ಕೈಗೆ ಹಾಕಿಲ್ಲ. ಹೊರಗೆ ಹೋದ ಮೇಲೆ ಅದನ್ನು ಮಾರಿ ಸೇವೆ ಮಾಡುತ್ತೇನೆ’ ಎಂದು ಗಂಭೀರವಾಗಿ ಹೇಳಿದರು.
ಆದರೆ ಸುದೀಪ್, ‘ಹಾಗೆ ಮಾಡಬೇಡಿ, ಚಿನ್ನ ಹಾಕಿಕೊಳ್ಳುವುದು ನಿಮಗೆ ಇಷ್ಟ ಹಾಕಿಕೊಳ್ಳಿ. ಆದರೆ ಅದನ್ನು ಮಾರಿ ಸೇವೆ ಮಾಡುವುದು ಬೇಡ. ನಿಮ್ಮ ಬಳಿ ಇರುವ ಹೆಚ್ಚುವರಿ ಹಣ ಇದ್ದಲ್ಲಿ ಅದರಿಂದ ಸೇವೆ ಮಾಡಿ. ಈಗ ಇರುವ ಚಿನ್ನವನ್ನು ಮಾರಿ ಅದನ್ನೆಲ್ಲ ಮಾಡುವುದು ಬೇಡ’ ಎಂದು ಬುದ್ಧಿವಾದ ಹೇಳಿದರು. ಸುರೇಶ್ ಸಹ ಒಪ್ಪಿಗೆ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ