ರಾಜಾಹುಲಿ (Rajahuli) ಸಿನಿಮಾದಲ್ಲಿ ನಟ ಯಶ್ರ (Yash) ಗೆಳೆಯನ ಪಾತ್ರದಲ್ಲಿ ನಟಿಸಿರುವ ಹರ್ಷ (Rajahuli Harsha) ತಮಗೆ ಅಸಭ್ಯವಾಗಿ ಸಂದೇಶ ಕಳಿಸಿದ್ದಾರೆ ಎಂದು ನಟಿ ತನಿಷಾ ಕುಪ್ಪಂಡ (Tanisha Kuppanda) ಅವಲತ್ತುಕೊಂಡಿದ್ದಾರೆ. ಪೆಂಟಗನ್ ಕನ್ನಡ ಸಿನಿಮಾದಲ್ಲಿ ನಟಿಸಿರುವ ತನಿಷಾ ಈ ಆರೋಪ ಮಾಡಿದ್ದು, ತಾವು ಹಾಕಿದ್ದ ಇನ್ಸ್ಟಾಗ್ರಾಂ ಸ್ಟೋರಿಗೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು ಸ್ಮೈಲಿ ಇಮೇಜಿನೊಂದಿಗೆ ಸಂದೇಶ ಕಳಿಸಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.
ನಟಿ ತನಿಷಾ ಅವರ ಸಂದರ್ಶನ ಮಾಡಿದ್ದ ಯೂಟ್ಯೂಬರ್ ಒಬ್ಬ ನೀವು ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಸಿದ್ದರಿದ್ದೀರಾ ಎಂದು ಅಸಭ್ಯ ಪ್ರಶ್ನೆ ಕೇಳಿದ್ದ. ಇದನ್ನು ಪ್ರತಿಭಟಿಸಿದ್ದ ನಟಿ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದರು. ಅದೇ ವಿಷಯವಾಗಿ ಮಾಹಿತಿ ನೀಡಲು ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು, ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದರು.
ಯಾರು ಹಾಗೆ ಮೆಸೇಜ್ ಮಾಡಿದ್ದು ಹೆಸರು ಹೇಳಿ ಎಂದಾಗ, ಮೊದಲಿಗೆ, ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೆ ಹೇಳಿದರು, ಬಳಿಕ ಪತ್ರಕರ್ತರು ಒತ್ತಾಯ ಮಾಡಿದಾಗ ಹರ್ಷ ಹೆಸರು ಹೇಳಿದರು ನಟಿ ತನಿಷಾ. ಇನ್ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಯಶ್ ನಾಯಕನಾಗಿ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ರಾಜಾಹುಲಿಯಲ್ಲಿ ಯಶ್ ಗೆಳೆಯನ ಪಾತ್ರದಲ್ಲಿ ಹರ್ಷ ನಟಿಸಿದ್ದಾರೆ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ಹರ್ಷ ರಾಜಾಹುಲಿ, ವರ್ಧನ, ರಘುವೀರ್, ಗಜಪಡೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌ಗೆ ಹಿಗ್ಗಾ-ಮುಗ್ಗಾ ಕ್ಲಾಸ್
ನಟಿ ತನಿಷಾ, ಪೆಂಟಗನ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಾಮನಬಿಲ್ಲು ಹೆಸರಿನ ಹಾಡೊಂದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಈ ವಿಷಯವಾಗಿ ಮಾತನಾಡುತ್ತಾ, ಕೊನೆಗೆ ನೀವು ಅಶ್ಲೀಲ ಸಿನಿಮಾಗಳಲ್ಲಿಯೂ ನಟಿಸುತ್ತೀರ ಎಂದು ಯೂಟ್ಯೂಬರ್ ಒಬ್ಬ ಕೇಳಿದ್ದ. ಅಸಭ್ಯವಾಗಿ ಪ್ರಶ್ನೆ ಕೇಳಿದ ಆ ಯೂಟ್ಯೂಬರ್ ಅನ್ನು ಅಲ್ಲೇ ನಟಿ ತನಿಷಾ ತರಾಟೆಗೆ ತೆಗೆದುಕೊಂಡಿದ್ದರು. ಚಿತ್ರತಂಡದ ಇತರರು ಸಹ ಯೂಟ್ಯೂಬರ್ ಅನ್ನು ಬೈದಿದ್ದರು. ಬಳಿಕ ಅವನ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ಪೆಂಟಗನ್ ಸಿನಿಮಾವು ಬೇರೆ-ಬೇರೆ ಕತೆಗಳನ್ನು ಸೇರಿಸಿ ಮಾಡಿದ ಸಿನಿಮಾ ಆಗಿದ್ದು, ಇದೇ ಏಪ್ರಿಲ್ 7 ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Mon, 3 April 23