Pentagon: ಅವನು ವೈರಲ್ ಆಗಲು ನನಗೆ ಅಸಭ್ಯ ಪ್ರಶ್ನೆ ಕೇಳಿದ: ನಟಿ ತನಿಷಾ
ಪೆಂಟಗನ್ ಕನ್ನಡ ಸಿನಿಮಾದ ನಟಿ ತನಿಷಾಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ ಯೂಟ್ಯೂಬರ್ ವಿರುದ್ಧ ದೂರು ನೀಡಲಾಗಿದೆ. ಆ ವ್ಯಕ್ತಿ ತಾನು ವೈರಲ್ ಆಗಲು ನನ್ನನ್ನು ಅಸಭ್ಯ ಪ್ರಶ್ನೆ ಕೇಳಿದ ಎಂದಿದ್ದಾರೆ ನಟಿ ತನಿಷಾ.
ಪೆಂಟಗನ್ (Pentagon) ಕನ್ನಡ ಸಿನಿಮಾದ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತೀರ ಎಂದು ಅಸಭ್ಯ ಪ್ರಶ್ನೆ ಕೇಳಿದ್ದ ಯೂಟ್ಯೂಬರ್ ವಿರುದ್ಧ ಚಿತ್ರತಂಡದ ನೆರವಿನೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆ ಕುರಿತು ಮಾಹಿತಿ ನೀಡಲೆಂದು ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟಿ ತನಿಷಾ, ಆ ವ್ಯಕ್ತಿ ತಾವು ಫೇಮಸ್ ಆಗಲು ವೈರಲ್ ಆಗಲು ಬೇಕೆಂದೇ ನನ್ನನ್ನು ಅಸಭ್ಯವಾಗಿ ಪ್ರಶ್ನೇ ಕೇಳಿದ್ದಾನೆ ಎಂದಿದ್ದಾರೆ.
ಆ ಯೂಟ್ಯೂಬರ್ ನನಗೆ ಕೆಲವು ವರ್ಷಗಳಿಂದಲೂ ಪರಿಚಯದವನೇ. ಈ ಹಿಂದೆಯೂ ನನ್ನ ಸಂದರ್ಶನಕ್ಕಾಗಿ ಕೇಳಿದ್ದ. ಆದರೆ ಆತನ ಮಾತನಾಡುವ ರೀತಿ ನನಗೆ ಹಿಡಿಸಿರಲಿಲ್ಲ. ಧಾರಾವಾಹಿಗಳ ಇವೆಂಟ್ ನಡೆದಾಗ ಇತರೆ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದ. ಆಗಾಗ ಮೆಸೇಜ್ ಕಳಿಸುತ್ತಿದ್ದ, ನನ್ನೊಂದಿಗೆ ಪ್ರೀಮಿಯರ್ ಶೋಗೆ ಬಾ, ಸಿನಿಮಾಕ್ಕೆ ಬಾ ಎನ್ನುತ್ತಿದ್ದ. ಚಿತ್ರರಂಗದಲ್ಲಿ ಹೇಗೆ ಬೆಳೆಯಬೇಕು ಎಂದು ನಾನು ಹೇಳಿಕೊಡುತ್ತೇನೆ ಎಂದೆಲ್ಲ ಸಂದೇಶ ಕಳಿಸುತ್ತಿದ್ದ ಎಂದು ಯೂಟ್ಯೂಬರ್ನ ಬಗ್ಗೆ ಆರೋಪಿಸಿದ್ದಾರೆ ನಟಿ ತನಿಷಾ.
ಅಂದು ಆತ ಆ ಪ್ರಶ್ನೆ ಕೇಳುವ ಮುನ್ನ, ಇನ್ನೊಬ್ಬ ಯೂಟ್ಯೂಬರ್‌ಗೆ ಸಂದರ್ಶನ ನೀಡುತ್ತಿದ್ದೆ. ಆಗ ಬೋಲ್ಡ್ ಸೀನ್ಗಳು ಹೇಗೆ ಚಿತ್ರೀಕರಣ ಆಗುತ್ತವೆ. ಬ್ಯಾಕ್ಲೆಸ್ ದೃಶ್ಯಕಗಳ ಚಿತ್ರೀಕರಣ ಹೇಗೆ ನಡೆಯುತ್ತೆ ಎಂದೆಲ್ಲ ವಿವರಿಸಿದ್ದೆ ಅದನ್ನೆಲ್ಲ ಆತನೂ ಕೇಳಿಸಿಕೊಂಡಿದ್ದ. ಹಾಗಿದ್ದರೂ ಸಹ ನನ್ನನ್ನು ಅಸಭ್ಯವಾಗಿ ಪ್ರಶ್ನೆ ಕೇಳಿದ. ಮಾಧ್ಯಮಕ್ಕೆ ಸಂಬಂಧಿಸಿದವನೆಂದು ನಾನು ಚಪ್ಪಲಿಯಲ್ಲಿ ಹೊಡೆಯದೆ ಸುಮ್ಮನೆ ಬಿಟ್ಟೆ. ಅಷ್ಟೆಲ್ಲ ಆದರೂ ಅವನಿಗೆ ಪಶ್ಚಾತಾಪ್ಪ ಇರಲಿಲ್ಲ. ನೀವು ನನ್ನ ಹೊಡೆದು, ಗಲಾಟೆ ಮಾಡಿದ್ದರೆ ವೈರಲ್ ಆಗಿರುತ್ತಿದ್ದೆ ಎಂದ, ಅವನಿಗೆ ವೈರಲ್ ಆಗಬೇಕೆಂಬ ಹುಚ್ಚು ಇತ್ತು, ಅದಕ್ಕಾಗಿಯೇ ಬೇಕೆಂದೇ ಅವನು ನನ್ನನ್ನು ಆ ಪ್ರಶ್ನೇ ಕೇಳಿದ ಎನಿಸುತ್ತದೆ” ಎಂದಿದ್ದಾರೆ ನಟಿ ತನಿಷಾ.
ಪೊಲೀಸರಿಗೆ ದೂರು ನೀಡುವಾಗಲು ಎಫ್ಐಆರ್ ಬೇಡ ಆದರೆ ಬೆದರಿಸಿ ಬುದ್ಧಿ ಹೇಳಿ ಎಂದೇ ಹೇಳಿದ್ದೆವು. ಆದರೆ ಪೊಲೀಸ್ ಠಾಣೆಯಿಂದ ಹೊರಬಂದು ಮಧ್ಯರಾತ್ರಿ 1:30 ಗೆ ನನಗೆ ಕರೆ ಮಾಡಿ, ನನ್ನನ್ನು ಇಟ್ಟುಕೊಂಡು ನೀವು ನಿಮ್ಮ ಸಿನಿಮಾಕ್ಕೆ ಪ್ರಚಾರ ಮಾಡಿಕೊಳ್ಳುತ್ತಿದ್ದೀರ. ನನ್ನ ಮೇಲೆ ದೌರ್ಜನ್ಯ ಮಾಡಿದ್ದೀರಿ, ನನ್ನನ್ನು ಹೊಡೆದಿದ್ದೀರಿ. ಈಗ ನಾನು ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ್ರೆ ಏನು ಮಾಡ್ತೀರ ಎಂದು ಪ್ರಶ್ನೆ ಮಾಡಿದ. ಆತನೊಬ್ಬ ನಾಚಿಕೆ ಇಲ್ಲದ ವ್ಯಕ್ತಿ. ಮಾಧ್ಯಮದ ಬೇಸಿಕ್ಸ್ ಸಹ ಗೊತ್ತಿಲ್ಲದ ವ್ಯಕ್ತಿ. ಆತ ನನ್ನೊಬ್ಬನೊಟ್ಟಿಗೆ ಮಾತ್ರವಲ್ಲ ಇನ್ನೂ ಹಲವು ಸೆಲೆಬ್ರಿಟಿಗಳಿಗೆ ಹೀಗೆಯೇ ಸಮಸ್ಯೆ ಮಾಡಿದ್ದಾನೆ” ಎಂದಿದ್ದಾರೆ ನಟಿ ತನಿಷಾ.
ಇದನ್ನೂ ಓದಿ: ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌ಗೆ ಹಿಗ್ಗಾ-ಮುಗ್ಗಾ ಕ್ಲಾಸ್
ನಿರ್ದೇಶಕ, ನಟ ರಘು ಶಿವಮೊಗ್ಗ ಮಾತನಾಡಿ, ಇದು ದೇವರಾಣೆಗೂ ಪಬ್ಲಿಸಿಟಿ ಗಿಮಿಕ್ ಅಲ್ಲ. ಅವನನ್ನು ಪ್ರೆಸ್ ಮೀಟ್ಗೆ ಕರೆದವರು ಯಾರೆಂಬುದು ಸಹ ನನಗೆ ಗೊತ್ತಿಲ್ಲ. ನೆಗೆಟಿವ್ ಪ್ರಚಾರದಿಂದ ಸಿನಿಮಾ ಹೆಸರು ಕೆಲವರಿಗೆ ಗೊತ್ತಾಗಬಹುದಷ್ಟೆ ಸಿನಿಮಾ ಚೆನ್ನಾಗಿದ್ದರಷ್ಟೆ ಅದು ಓಡಲು ಸಾಧ್ಯ. ಬೋಲ್ಡ್ ಆಗಿ ನಟಿಸಿದ್ದಾರೆಂದು ಹೇಗೆಂದರೆ ಹಾಗೆ ಪ್ರಶ್ನೆ ಕೇಳಿರುವ ಆತ ಅದೇ ಹಾಡಿನಲ್ಲಿ ಒಬ್ಬ ಯುವಕನೂ ನಟಿಸಿದ್ದಾನೆ ಅವನನ್ನು ಯಾಕೆ ಅದೇ ಪ್ರಶ್ನೆ ಕೇಳಿಲ್ಲ ಎಂದು ಪ್ರಶ್ನಿಸಿದರು.
ಪೆಂಟಗಾನ್ ಸಿನಿಮಾವು ಐದು ಬೇರೆ-ಬೇರೆ ಕತೆಗಳನ್ನು ಒಟ್ಟು ಮಾಡಿ ಮಾಡಿರುವ ಕನ್ನಡ ಸಿನಿಮಾ ಆಗಿದ್ದು, ಗುರು ದೇಶಪಾಂಡೆ ಸೇರಿ ಇನ್ನೂ ಕೆಲವು ನಿರ್ದೇಶಕರು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾವು ಏಪ್ರಿಲ್ 07 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ