ನಟಿ ಭಾವನಾ ಅವರು ಕನ್ನಡ ಮಂದಿಗೆ ಚಿರಪರಿಚಿತರು. ಶಿವರಾಜ್ಕುಮಾರ್ (Shivarajkumar), ಪುನೀತ್ ರಾಜ್ಕುಮಾರ್ ಸೇರಿ ಅನೇಕ ಸ್ಟಾರ್ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ತಂದೆಯ ನಿಧನದ ಬಗ್ಗೆ ಮಾತನಾಡಿದ್ದಾರೆ. ಅವರು ತಂದೆಯನ್ನು ಕಳೆದುಕೊಂಡು 8 ವರ್ಷ ಕಳೆದಿದೆ. ಆದರೆ, ಆ ನೋವು ಮಾತ್ರ ಹಾಗೆಯೇ ಇದೆ.
‘ನನ್ನ ತಂದೆಯ ಸಾವಿನ ನೋವು ಯಾವಾಗಲೂ ಹಾಗೆಯೇ ಇರುತ್ತದೆ. ಹೊರಗೆ ಎಷ್ಟು ಖುಷಿಯಾಗಿದ್ದರೂ ಒಳಗಿನ ನೋವು ಹಾಗೆಯೇ ಇದೆ. ಇಷ್ಟು ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಜೀವನ ಸಂಪೂರ್ಣವಾಗಿ ಬದಲಾಗಿದೆ. ಆದರೆ ನನ್ನ ತಂದೆ ಇಲ್ಲ ಎಂಬುದು ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಕಾಡುವಿಕೆ ಕೆಲವೊಮ್ಮೆ ಹೆಚ್ಚಿರುತ್ತದೆ, ಕೆಲವೊಮ್ಮೆ ಕಡಿಮೆ. ಆದರೆ, ಆ ನೋವು ಹಾಗೆಯೇ ಇದೆ’ ಎಂದಿದ್ದಾರೆ ಭಾವನಾ.
ಭಾವನಾ ಅವರ ತಂದೆಯ ಹೆಸರು ಬಾಲಚಂದ್ರ. ಅವರು 2015ರಲ್ಲಿ ನಿಧನ ಹೊಂದಿದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು. ಬಾಲಚಂದ್ರ ಅವರಿಗೆ ಅನಾರೋಗ್ಯ ಕಾಡಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ತಂದೆಯ ಬಗ್ಗೆ ಅವರು ಯಾವಾಗಲೂ ಪ್ರೀತಿ ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ತಂದೆ ಕಾರಣ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಿದೆ.
ಇದನ್ನೂ ಓದಿ: ಕ್ಯೂಟ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಭಾವನಾ ಮೆನನ್; ಇಲ್ಲಿದೆ ಫೋಟೋ ಗ್ಯಾಲರಿ
ಭಾವನಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2002ರಲ್ಲಿ. ಮಲಯಾಳಂ ಸಿನಿಮಾ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಮಲಯಾಳಂ ಸಿನಿಮಾ ಮಾಡಿದರು. 2010ರಲ್ಲಿ ರಿಲೀಸ್ ಆದ ‘ಜಾಕಿ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ಪುನೀತ್ ರಾಜ್ಕುಮಾರ್ಗೆ ಜೊತೆಯಾಗಿ ಅವರು ತೆರೆಹಂಚಿಕೊಂಡರು. ಅಲ್ಲಿಂದ ಅವರು ‘ಜಾಕಿ’ ಭಾವನಾ ಎಂದೇ ಫೇಮಸ್ ಆದರು. ನಂತರ ಅವರು ‘ರೊಮಿಯೋ’, ‘ಟೋಪಿವಾಲ’, ‘ಮೈತ್ರಿ’, ‘ಇನ್ಸ್ಪೆಕ್ಟರ್ ವಿಕ್ರಮ್’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ