‘ಧುರಂಧರ್’ ಎದುರು ಮಂಕಾದ ‘ದಿ ಡೆವಿಲ್’: ದರ್ಶನ್ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದ್ದು ಯಾಕೆ?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ವಾರಾಂತ್ಯದಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ ಆ ರೀತಿ ಆಗಿಲ್ಲ. ‘ದಿ ಡೆವಿಲ್’ ಗಳಿಕೆ ಕಡಿಮೆ ಆಗಿದೆ. ‘ಧುರಂಧರ್’ ಸಿನಿಮಾದ ಪೈಪೋಟಿ, ಪೈರಸಿ ಕಾಟ ಸೇರಿದಂತೆ ಹಲವು ಕಾರಣಗಳಿಂದ ‘ದಿ ಡೆವಿಲ್’ ಹಿನ್ನಡೆ ಆಗಿದೆ.

‘ಧುರಂಧರ್’ ಎದುರು ಮಂಕಾದ ‘ದಿ ಡೆವಿಲ್’: ದರ್ಶನ್ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದ್ದು ಯಾಕೆ?
Ranveer Singh, Darshan

Updated on: Dec 14, 2025 | 10:30 AM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ (The Devil Movie) ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇತ್ತು. ಡಿಸೆಂಬರ್ 11ರಂದು ಅದ್ದೂರಿಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಧೂಳೆಬ್ಬಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಮೊದಲ ದಿನ ಉತ್ತಮವಾಗಿಯೇ ಕಲೆಕ್ಷನ್ ಆಯಿತು. ಆದರೆ 2 ಹಾಗೂ 3ನೇ ದಿನದ ಕಲೆಕ್ಷನ್ ಕಡಿಮೆ ಆಯಿತು. ವಾರಂತ್ಯದಲ್ಲಿ ಕೂಡ ದೊಡ್ಡ ಮೊತ್ತವನ್ನು ಈ ಸಿನಿಮಾ ಕಲೆ ಹಾಕಿಲ್ಲ. ಈ ಸಂದರ್ಭದಲ್ಲಿ ಹಿಂದಿಯ ‘ಧುರಂಧರ್’ (Dhurandhar) ಸಿನಿಮಾ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿದೆ.

sacnilk ವರದಿ ಪ್ರಕಾರ, ಮೊದಲ ದಿನ ‘ದಿ ಡೆವಿಲ್’ ಸಿನಿಮಾ ಗಳಿಸಿದ್ದು 10 ಕೋಟಿ ರೂಪಾಯಿ. ಆದರೆ ಚಿತ್ರತಂಡದವರು 13.8 ಕೋಟಿ ರೂಪಾಯಿ ಎಂದು ಘೋಷಿಸಿದರು. 2ನೇ ದಿನ 3.4 ಕೋಟಿ ರೂಪಾಯಿ ಹಾಗೂ 3ನೇ ದಿನ ಅಂದಾಜು 3.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ಮಾಡಿದೆ. ಮೊದಲ ದಿನದ ಕಲೆಕ್ಷನ್​​ಗೆ ಹೋಲಿಸಿದರೆ 2 ಮತ್ತು 3ನೇ ದಿನದ ಕಲೆಕ್ಷನ್ ಕಡಿಮೆ ಆಗಿದೆ.

‘ದಿ ಡೆವಿಲ್’ ಸಿನಿಮಾದ ಕಲೆಕ್ಷನ್ ಕುಸಿಯಲು ಕೆಲವು ಕಾರಣಗಳು ಇವೆ. ಈಗಾಗಲೇ ಈ ಸಿನಿಮಾದ ಪೈರಸಿ ಕಾಪಿ ಹರಿದಾಡುತ್ತಿದೆ. ಇದರಿಂದಾಗಿ ಚಿತ್ರಮಂದಿರಕ್ಕೆ ಜನರು ಬರುವುದು ಕಡಿಮೆ ಆಗಿರುವ ಸಾಧ್ಯತೆ ಹೆಚ್ಚಿದೆ. ಚಿತ್ರತಂಡದವರು ಎಷ್ಟೇ ಕಷ್ಟಪಟ್ಟರೂ ಕೂಡ ಪೈರಸಿ ಹಾವಳಿ ತಡೆಯಲು ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿ. ಇನ್ನು, ಬೇರೆ ಭಾಷೆಯ ಸಿನಿಮಾಗಳ ಪೈಪೋಟಿ ಕೂಡ ಇದೆ.

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ ಬಿಡುಗಡೆಯಾಗಿ 10 ದಿನ ಕಳೆದಿವೆ. 9ನೇ ದಿನ ಈ ಚಿತ್ರಕ್ಕೆ 53 ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ‘ದಿ ಡೆವಿಲ್’ ಗಲ್ಲಾಪೆಟ್ಟಿಗೆ ಗಳಿಕೆಯ ಮೇಲೆ ‘ಧುರಂಧರ್’ ಸಿನಿಮಾ ಪರಿಣಾಮ ಬೀರಿದೆ.

ಇದನ್ನೂ ಓದಿ: 9ನೇ ದಿನ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಧುರಂಧರ್’ ಸಿನಿಮಾ

ತೆಲುಗಿನಲ್ಲಿ ‘ಅಖಂಡ 2’ ಸಿನಿಮಾ ಬಿಡುಗಡೆ ಆಗಿದೆ. ನಂದಮೂರಿ ಬಾಲಕೃಷ್ಣ ನಟನೆಯ ಈ ಚಿತ್ರಕ್ಕೆ ಕರ್ನಾಟಕದಲ್ಲಿ ಕೂಡ ಒಳ್ಳೆಯ ಮಾರುಕಟ್ಟೆ ಇದೆ. ಈ ಸಿನಿಮಾದ ಹಲವು ದೃಶ್ಯಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಆದರೂ ಕೂಡ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಈ ಚಿತ್ರಕ್ಕೆ 22.5 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. 2ನೇ ದಿನ 15.50 ಕೋಟಿ ರೂಪಾಯಿ ಗಳಿಸಿದೆ. ‘ದಿ ಡೆವಿಲ್’ ಗಳಿಕೆ ಕಡಿಮೆ ಆಗಲು ‘ಅಖಂಡ 2’ ಪೈಪೋಟಿ ಕೂಡ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.