9ನೇ ದಿನ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಧುರಂಧರ್’ ಸಿನಿಮಾ
ಬಿಡುಗಡೆಯಾಗಿ ಒಂದು ವಾರ ಕಳೆದರೂ ‘ಧುರಂಧರ್’ ಸಿನಿಮಾ ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದ್ದರಿಂದ ಭರ್ಜರಿ ಕಲೆಕ್ಷನ್ ಆಗುತ್ತಿದೆ. 9ನೇ ದಿನ ಈ ಸಿನಿಮಾ ಮಾಡಿರುವ ಕಲೆಕ್ಷನ್ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ್’ (Dhurandhar) ಸಿನಿಮಾದ ಹವಾ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ರಣವೀರ್ ಸಿಂಗ್ (Ranveer Singh) ಅವರಿಗೆ ಈ ಸಿನಿಮಾದಿಂದ ಸೂಪರ್ ಸಕ್ಸಸ್ ಸಿಕ್ಕಿದೆ. ದೇಶಭಕ್ತಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. 9ನೇ ದಿನ ಕೂಡ ಈ ಚಿತ್ರಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಿದೆ. ಆ ಮೂಲಕ ನಿರ್ಮಾಪಕರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. 9 ದಿನಕ್ಕೆ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ (Dhurandhar Box Office Collection) 292 ಕೋಟಿ ರೂಪಾಯಿ ಆಗಿದೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಉರಿ’ ರೀತಿಯೇ ‘ಧುರಂಧರ್’ ಸಿನಿಮಾದಲ್ಲಿ ಕೂಡ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ. ಈ ಸಿನಿಮಾದ ಬಹುತೇಕ ಕಥೆ ಪಾಕಿಸ್ತಾನದಲ್ಲಿ ನಡೆಯುತ್ತದೆ. ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.
ಮೊದಲ ದಿನ ‘ಧುರಂಧರ್’ ಸಿನಿಮಾಗೆ 28 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. 2ನೇ ದಿನ 32 ಕೋಟಿ ರೂಪಾಯಿ ಆಯಿತು. 3ನೇ ದಿನ 43 ಕೋಟಿ, 4ನೇ ದಿನ 23.25 ಕೋಟಿ ರೂಪಾಯಿ, 5, 6 ಹಾಗೂ 7ನೇ ದಿನ ತಲಾ 27 ಕೋಟಿ ರೂಪಾಯಿ, 8ನೇ ದಿನ 32.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಅಚ್ಚರಿ ಎಂದರೆ, ಈ ಎಲ್ಲ ದಿನಗಳಿಗಿಂತಲೂ 9ನೇ ದಿನ ಬರೋಬ್ಬರಿ 53 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ಅಂದಾಜಿಸಿದೆ.
ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಯಿತು. ಅದರ ನಂತರದ ವಾರ ‘ದಿ ಡೆವಿಲ್’, ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಆ ಸಿನಿಮಾಗಳ ಎದುರಿನಲ್ಲಿ ‘ಧುರಂಧರ್’ ಸಿನಿಮಾ ಗಟ್ಟಿಯಾಗಿ ನಿಂತಿದೆ. ಬೇರೆ ಎಲ್ಲ ಸಿನಿಮಾಗಳಿಗೆ ಖಡಕ್ ಫೈಟ್ ನೀಡುತ್ತಾ ನೂರಾರು ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. 10ನೇ ದಿನವಾದ ಭಾನುವಾರ (ಡಿಸೆಂಬರ್ 14) ಕೂಡ ಈ ಚಿತ್ರಕ್ಕೆ ದೊಡ್ಡ ಮೊತ್ತದ ಕಲೆಕ್ಷನ್ ಆಗಲಿದೆ.
ಇದನ್ನೂ ಓದಿ: ‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್
ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ನಾಯಕಿಯಾಗಿ ಸಾರಾ ಅರ್ಜುನ್ ಅವರು ಅಭಿನಯಿಸಿದ್ದಾರೆ. ಅಕ್ಷಯ್ ಖನ್ನಾ, ಅರ್ಜುನ್ ರಾಮ್ಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಆರ್. ಮಾಧವನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ವಿಶೇಷವಾಗಿ ಅಕ್ಷಯ್ ಖನ್ನಾ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




