‘ದಿ ಹಗ್ ಆಫ್ ಎಂಪ್ಟಿನೆಸ್’: ಗೋವಾ ಚಿತ್ರೋತ್ಸವದಲ್ಲಿ ಗಮನ ಸೆಳೆದ ಕನ್ನಡಿಗನ ಕಥೆ

ಗೋವಾದಲ್ಲಿ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ವಿಶ್ವ ಸಿನಿಮಾ ರಂಗದ ಹಲವು ಖ್ಯಾತನಾಮ ನಟ, ನಟಿ, ತಂತ್ರಜ್ಞರು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವು ದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಇವುಗಳ ನಡುವೆ ಕನ್ನಡದ ಪುಟ್ಟ ಸಾಕ್ಷ್ಯಚಿತ್ರವೊಂದು ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.

ದಿ ಹಗ್ ಆಫ್ ಎಂಪ್ಟಿನೆಸ್: ಗೋವಾ ಚಿತ್ರೋತ್ಸವದಲ್ಲಿ ಗಮನ ಸೆಳೆದ ಕನ್ನಡಿಗನ ಕಥೆ
The Hug Of Emptiness

Updated on: Nov 26, 2026 | 6:36 PM

ಮುಖ್ಯಾಂಶಗಳು

  • ಗೋವಾ ಚಿತ್ರೋತ್ಸವದಲ್ಲಿ ಕನ್ನಡಿಗನ ಕಥೆ
  • ಕಾಡಿನ ಜೀವಿ ಆಗಿರುವ ಚಂದ್ರಶೇಖರ್
  • ಸಾಕ್ಷ್ಯಚಿತ್ರ ನಿರ್ದೇಶಿಸಿರುವ ಪ್ರದೀಪ್ ಕೆಂಚನೂರು

ಗೋವಾದಲ್ಲಿ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಭಾರತ ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸಿನಿಮಾಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ. ವಿಶ್ವ ಸಿನಿಮಾ ರಂಗದ ಹಲವು ಖ್ಯಾತನಾಮ ನಟ, ನಟಿ, ತಂತ್ರಜ್ಞರು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವುಗಳ ನಡುವೆ ಕನ್ನಡದ ಪುಟ್ಟ ಸಾಕ್ಷ್ಯಚಿತ್ರವೊಂದು ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.

ಪ್ರದೀಪ್ ಕುಮಾರ್ ಶೆಟ್ಟಿ (ಡಾ. ಪ್ರದೀಪ್ ಕೆಂಚನೂರು) ನಿರ್ದೇಶಿಸಿರುವ ‘ದಿ ಹಗ್ ಆಫ್​ ಎಂಪ್ಟಿನೆಸ್’ ಕನ್ನಡ ಸಾಕ್ಷ್ಯಚಿತ್ರ 2025ರಲ್ಲಿ ನಿರ್ಮಾಣವಾಗಿದ್ದು, 20 ನಿಮಿಷಗಳ ಈ ಕಿರುಚಿತ್ರ ಆಸ್ತಿ ಕಳೆದುಕೊಂಡು ದಟ್ಟ ಕಾಡಿನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ವ್ಯಕ್ತಿಯೊಬ್ಬರ ಜೀವನದ ಕಥೆಯನ್ನು ಆಧರಿಸಿದೆ. ಎಲ್ಲವನ್ನೂ ಕಳೆದುಕೊಂಡು ಕಾಡಿನಲ್ಲಿ ಬದುಕುತ್ತಿದ್ದರೂ ಆ ವ್ಯಕ್ತಿಯ ಸಂತೋಷ, ಮಾನವ ಘನತೆ ಮತ್ತು ಛಲದ ಬಗ್ಗೆ ಮಾತನಾಡುತ್ತದೆ ಈ ಕಿರುಚಿತ್ರ. ಈ ವರ್ಷದ ಆರಂಭದಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರತಿಷ್ಠಿತ ಫಿಪ್ರೆಸ್ಕಿ ಅಂತಾರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಯನ್ನೂ ಗೆದ್ದಿದೆ.

Loading...

ಸಾಕ್ಷ್ಯಚಿತ್ರದ ಕಥೆಯೇನು?

ಸುಳ್ಯ ಸಹಕಾರಿ ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿಸಲಾಗದೆ, ಅಡಮಾನವಿಟ್ಟಿದ್ದ ಆಸ್ತಿಯನ್ನು 2003ರಲ್ಲಿ ಕಳೆದುಕೊಂಡ ಚಂದ್ರಶೇಖರ್ ಅವರ ಬದುಕೇ ಚಿತ್ರದ ಕಥಾವಸ್ತು. ಬ್ಯಾಂಕಿನ ಈ ಅಮಾನವೀಯ ಕ್ರಮವನ್ನು ಪ್ರಶ್ನಿಸಿ ಅವರು ಆರಂಭಿಸಿದ ಕಾನೂನು ಹೋರಾಟ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಈ ನಡುವೆ ಅವರು ಕಾಡಿನ ನಿರ್ಜನ ಪ್ರದೇಶವನ್ನೇ ಮನೆಯನ್ನಾಗಿಸಿಕೊಂಡಿದ್ದಾರೆ. ಅಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅದನ್ನೇ ಕಿರುಚಿತ್ರದಲ್ಲಿ ತೋರಿಸಿದ್ದಾರೆ ನಿರ್ದೇಶಕ ಪ್ರದೀಪ್ ಕೆಂಚನೂರು.

ಈ ವಿಷಯ ಆಯ್ಕೆ ಮಾಡಿಕೊಂಡ ಕಾರಣವನ್ನು ವಿವರಿಸಿದ ನಿರ್ದೇಶಕರು, ‘ನನ್ನನ್ನು ಸೆಳೆದದ್ದು ಕೇವಲ ಕಾನೂನು ಸಮರವಲ್ಲ, ಚಂದ್ರಶೇಖರ್ ಅವರ ಜೀವನ ದೃಷ್ಟಿ. ವಿದ್ಯುತ್, ರಸ್ತೆಯಂತಹ ಮೂಲಸೌಕರ್ಯಗಳಿಲ್ಲದೆ, ಭಾರಿ ಮಳೆ ಮತ್ತು ಕಾಡುಪ್ರಾಣಿಗಳ ನಡುವೆಯೂ ಅವರು ದಿನನಿತ್ಯದ ಬದುಕಿನಲ್ಲಿ ಒಂದು ಲಯ ಹಾಗೂ ಉದ್ದೇಶ ಕಂಡುಕೊಂಡಿದ್ದಾರೆ. ಸಂತೋಷಕ್ಕೆ ಹಲವು ರೂಪಗಳಿವೆ, ಅದು ಭೌತಿಕ ಸುಖಗಳಿಂದಲೇ ನಿರ್ಧಾರವಾಗಬೇಕಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಶಾಲಾ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ

ಸಾಮಾನ್ಯ ನಿರೂಪಣಾ ಶೈಲಿಯ ಬದಲಾಗಿ, ಚಂದ್ರಶೇಖರ್ ಅವರ ಒಂದು ದಿನದ ಚಟುವಟಿಕೆಗಳನ್ನು ಗಮನಿಸುವ ಶೈಲಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಇದರಿಂದ ಅವರ ಬದುಕಿನ ಲಯ ಮತ್ತು ಕಾಡಿನೊಂದಿಗಿನ ಅವರ ಸಂಬಂಧ ತೆರೆಯ ಮೇಲೆ ಸಹಜವಾಗಿ ಮೂಡಿಬಂದಿದೆ ಎಂದು ಅವರು ತಿಳಿಸಿದರು. ಇತರರಿಗೆ ಖಾಲಿಯಾಗಿ ಕಾಣುವ ಬದುಕಿನಲ್ಲೂ ಅರ್ಥ ಕಂಡುಕೊಳ್ಳಬಹುದು ಎಂಬುದನ್ನು ಶೀರ್ಷಿಕೆ ಪ್ರತಿಬಿಂಬಿಸುತ್ತದೆ ಎಂದ ಅವರು, ಗ್ರೀಕ್ ಚಲನಚಿತ್ರ ನಿರ್ದೇಶಕ ಯೊರ್ಗೋಸ್ ಲ್ಯಾಂತಿಮೋಸ್ ಅವರ ಕೃತಿಗಳು ಈ ಶೀರ್ಷಿಕೆಗೆ ಪ್ರೇರಣೆ ಎಂದರು.

ವೃತ್ತಿಯಿಂದ ಶಿಕ್ಷಕರಾಗಿರುವ ಸಿನಿಮಾ ಪ್ರೇಮಿ ಪ್ರದೀಪ್ ಕೆಂಚನೂರು, ಕೇವಲ 4 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ ಎಂದರು. ಸಂಪೂರ್ಣ ಸೃಜನಾತ್ಮಕ ಸ್ವಾತಂತ್ರ್ಯ ನೀಡಿದ ಆಪ್ತ ಸ್ನೇಹಿತರೊಬ್ಬರು ಚಿತ್ರಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದು ಗೆಳೆಯನ ಸಹಾಯ ಸ್ಮರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Thu, 26 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us