ಸದಾ ಕಾಲ ಸಿನಿಮಾ ಮಂದಿ ಕಾಣಸಿಗುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ದ ಪ್ರಸೆಂಟ್’ ಸಿನಿಮಾ (The Present Movie) ಸೆಟ್ಟೇರಿದೆ. ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ (GEN) ಎಂಬ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದೇ ಈ ಸಂಸ್ಥೆಯ ಉದ್ದೇಶ. ಅದ್ದೂರಿಯಾಗಿ ‘ದ ಪ್ರಸೆಂಟ್’ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ರಾಜೀವ್ ರಾಥೋಡ್ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ದಿಯಾ ಹಾಗೂ ಮಾನಸಾ ಗೌಡ ಅವರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ರಾಜೀವ್ ರಾಥೋಡ್, ದಿಯಾ, ಮಾನಸಾ ಗೌಡ ಮಾತ್ರವಲ್ಲದೇ ಬೇಬಿ ಆರಾಧ್ಯಾ, ರಾಬರ್ಟ್, ಅವಿನಾಶ್, ದುಬೈ ರಫೀಕ್, ಶ್ರೀಧರ್, ಮಂಜೇಶ್ ಗೌಡ, ಸಹನಾ, ಭುವನಾ, ಆಶಾ, ಮಾಧುರಿ ರೆಡ್ಡಿ, ಭಾವನಾ, ಶೌರ್ಯ, ಸಮೃದ್ದಿ, ಮಮತಾ, ಅರುಣ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಮಾಜಿ ಸಂಸದ ಎಲ್. ಶಿವರಾಮೇಗೌಡ ಅವರು ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಬಂದು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತುಮಕೂರು ಜಿಲ್ಲೆಯ ಯುವ ರೈತ ರಮೇಶ್ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಪೋಲೀಸ್ ಅಧಿಕಾರಿ ಆರ್. ನವೀನ್ ಕುಮಾರ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು.
ನಿರ್ಮಾಪಕ, ‘ಜೆನ್’ ಸಂಸ್ಥೆಯ ಮಾಲೀಕ ಹಾಗೂ ನಿರ್ದೇಶಕ ಶಿವಪೂರ್ಣ ಅವರು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಇದು ಮೈಥಾಲಜಿ ವಿಷಯಗಳನ್ನು ಹೊಂದಿರುವ ಸಿನಿಮಾ. ಚಿತ್ರಕಥೆ ಬರೆಯಲು 1 ವರ್ಷ ಸಮಯ ಬೇಕಾಯಿತು. ಒಂದು ಆತ್ಮದ 3 ಜನ್ಮದ ಕಥೆ ಇದರಲ್ಲಿ ಇರಲಿದೆ. ಪ್ರಸೆಂಟ್, ಪಾಸ್ಟ್ ಮತ್ತು ಫ್ಯೂಚರ್ ಎಂದು 3 ಭಾಗಗಳಲ್ಲಿ ಸಿನಿಮಾ ಬರಲಿದೆ. ಮೊದಲ ಭಾಗದಲ್ಲಿ ಪ್ರಸೆಂಟ್ ಇರಲಿದೆ. ಈ ಸಿನಿಮಾದ ನಂತರ ಪಾಸ್ಟ್ ಮತ್ತು ಫ್ಯೂಚರ್ ಪ್ರಾಜೆಕ್ಟ್ಗಳು ಸೆಟ್ಟೇರುತ್ತವೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ನಿಗದಿಯಾಯ್ತು ‘ಕಾಗೆ ಬಂಗಾರ’ಕ್ಕೆ ಮುಹೂರ್ತ, ನಾಯಕ ಯಾರು?
‘ದ ಪ್ರಸೆಂಟ್’ ಸಿನಿಮಾದ ಬಹುತೇಕ ಶೂಟಿಂಗ್ ಬೆಂಗಳೂರು ಹಾಗೂ ಕೇರಳದಲ್ಲಿ ನಡೆಸಲಾಗುತ್ತದೆ. ಶೇಕಡ 10ರಷ್ಟು ಗ್ರಾಫಿಕ್ಸ್ ಕೆಲಸ ಇರುತ್ತದೆ. ಪ್ರಸಾದ್ ಪುಲಿಚರ್ಲ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ. ಕನ್ನಡ ಮಾತ್ರಲ್ಲದೇ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರ ಗುರಿ.
ಹಲವು ಪ್ರತಿಭೆಗಳಿಗೆ ‘ಜೆನ್’ ಮೂಲಕ ವೇದಿಕೆ ಸೃಷ್ಟಿಯಾಗಿದೆ. ವರ್ಷಕ್ಕೆ 10 ಸಿನಿಮಾಗಳನ್ನು ತಯಾರು ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಫ್ಯಾಷನ್ ಶೋ, ಸ್ಯಾಟಲೈಟ್ ಚಾನಲ್ ಮುಂತಾದ್ದನ್ನು ಆರಂಭಿಸುವ ಪ್ಲ್ಯಾನ್ ಕೂಡ ಇದೆ ಎಂದು ತಂಡದವರು ಮಾಹಿತಿ ನೀಡಿದರು. ಕಲರ್ಫುಲ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೊಮೋ ಹಾಗೂ ಟೈಟಲ್ ಅನಾವರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.