ಸ್ಯಾಂಡಲ್ವುಡ್ ಮೂಲಕ ಬಣ್ಣದ ಬದುಕು ಆರಂಭಿಸಿದ ಸಾಕಷ್ಟು ನಟಿಮಣಿಯರು ನಂತರ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಇವರಲ್ಲಿ, ಕೆಲವರು ಯಶಸ್ವಿಯಾದರೆ, ಇನ್ನೂ ಕೆಲವರು ಹೇಳ ಹೆಸರಿಲ್ಲದಂತೆ ಕಾಣೆಯಾಗಿದ್ದಾರೆ. ಹಾಗಾದರೆ, ಕನ್ನಡದಿಂದ ಬಣ್ಣದ ಬದುಕು ಆರಂಭಿಸಿ ಪರಭಾಷೆಯಲ್ಲಿ ಮಿಂಚಿದ ನಟಿಯರು ಯರ್ಯಾರು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ರೇಖಾ: ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿಯರ ಪೈಕಿ ರೇಖಾ ಮುಂಚೂಣಿಯಲ್ಲಿದ್ದಾರೆ. ಆರಂಭದ ದಿನಗಳಲ್ಲಿ ಭಾನುರೇಖಾ ಗಣೇಶನ್ ಆಗಿದ್ದ ಅವರು, ನಂತರ ರೇಖಾ ಆಗಿ ಬಾಲಿವುಡ್ನಲ್ಲಿ ಗುರುತಿಸಿಕೊಂಡರು. ಇವರಿಗೆ ಸಾಕಷ್ಟು ನ್ಯಾಷನಲ್ ಅವಾರ್ಡ್ಗಳು ಬಂದಿವೆ. ಇವರು 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೇಖಾ ಸಿನಿಮಾ ಬದುಕು ಆರಂಭಿಸಿದ್ದು ಕನ್ನಡ ಸಿನಿಮಾ ಮೂಲಕ. 1969ರಲ್ಲಿ ತೆರೆಕಂಡ ‘ಆಪರೇನ್ ಜಾಕ್ಪಾಟ್ನಲ್ಲಿ ಸಿ.ಐ.ಡಿ 999’ ಚಿತ್ರದಲ್ಲಿ ರಾಜ್ಕುಮಾರ್ಗೆ ಜತೆಯಾಗಿ ರೇಖಾ ಕಾಣಿಸಿಕೊಂಡಿದ್ದರು.
ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಬಾಲಿವುಡ್ನ ಬಹುಬೇಡಿಕೆಯ ನಟಿ. ಅವರ ನಟನೆಯ ಸಾಕಷ್ಟು ಚಿತ್ರಗಳು ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿವೆ. ಇವರು ಕನ್ನಡದ ‘ಐಶ್ವರ್ಯ‘ ಸಿನಿಮಾದಲ್ಲಿ ಉಪೇಂದ್ರಗೆ ಜತೆಯಾಗಿ ನಟಿಸಿದ್ದರು. ಇದು ಅವರ ಸಿನಿಬದುಕಿನ ಮೊದಲ ಸಿನಿಮಾ. 2006ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದರು.
ರಶ್ಮಿಕಾ ಮಂದಣ್ಣ: 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ರಶ್ಮಿಕಾ ಮಂದಣ್ಣ. ನಂತರ ಅವರು ಟಾಲಿವುಡ್ಗೆ ಕಾಲಿಟ್ಟರು. ಅಲ್ಲಿ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡ ನಂತರ ಕಾಲಿವುಡ್ಗೆ ಪಯಣ ಬೆಳೆಸಿದರು. ನಂತರ ನೇರವಾಗಿ ಅವರು ಕಾಲಿಟ್ಟಿದ್ದು ಬಾಲಿವುಡ್ಗೆ. ಸದ್ಯ ಹಿಂದಿಯಲ್ಲಿ ಎರಡು ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಜೆ. ಜಯಲಲಿತಾ: ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ಮಿಂಚಿದವರು ಜೆ.ಜಯಲಲಿತಾ. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಅವರು ರಾಜಕೀಯದತ್ತ ಹೊರಳಿದರು. ಅವರ ಕುರಿತು ತಲೈವಿ ಹೆಸರಿನಲ್ಲಿ ಬಯೋಪಿಕ್ ಕೂಡ ಸಿದ್ಧಗೊಂಡಿದ್ದು, ರಿಲೀಸ್ಗೆ ರೆಡಿ ಇದೆ. ಕನ್ನಡದ ‘ಶ್ರೀ ಶೈಲ ಮಹಾತ್ಮೆ’ ಸಿನಿಮಾದಲ್ಲಿ ಜಯಲಲಿತಾ ಬಾಲ ಕಲಾವಿದೆಯಾಗಿ ನಟಿಸಿದ್ದರು. ರಾಜ್ಕುಮಾರ್ ನಟನೆಯ ಈ ಸಿನಿಮಾ 1961ರಲ್ಲಿ ರಿಲೀಸ್ ಆಗಿತ್ತು.
ಸೌಂದರ್ಯಾ: ಸೌಂದರ್ಯಾ ದಕ್ಷಿಣ ಭಾರತದ ಖ್ಯಾತ ನಟಿ ಎನಿಸಿಕೊಂಡಿದ್ದರು. 1992ರಲ್ಲಿ ತೆರೆಗೆ ಬಂದ ‘ಗಂಧರ್ವ’ ಸಿನಿಮಾದಲ್ಲಿ ಲೀಡ್ ರೋಲ್ ಮಾಡುವ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ಟಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದರು.
ರಾಕುಲ್ ಪ್ರೀತ್ ಸಿಂಗ್: ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಕುಲ್ ಪ್ರೀತ್ ಸಿಂಗ್ ಬಣ್ಣದ ಬದುಕು ಆರಂಭಿಸಿದ್ದು ಸ್ಯಾಂಡಲ್ವುಡ್ನಿಂದ. 2009ರಲ್ಲಿ ರಿಲೀಸ್ ಆದ ‘ಗಿಲ್ಲಿ’ ಚಿತ್ರದಲ್ಲಿ ರಾಕುಲ್ ಹೀರೋಯಿನ್ ಆಗಿದ್ದರು. ಇದು ಅವರ ಮೊದಲ ಸಿನಿಮಾ.
ನಿತ್ಯಾ ಮೆನನ್: ದಕ್ಷಿಣ ಭಾರತದಲ್ಲಿ ನಿತ್ಯಾ ಮೆನನ್ ಬಹುಬೇಡಿಕೆ ಹೊಂದಿದ್ದರು. ಇವರು ಹೆಚ್ಚಾಗಿ ನಟಿಸಿದ್ದು ಮಲಯಾಳಂ ಚಿತ್ರರಂಗದಲ್ಲಿ ಆದರೆ, ಇವರ ಮೊದಲ ಸಿನಿಮಾ ಕನ್ನಡದ್ದು. 17ನೇ ವಯಸ್ಸಿಗೆ ಸಿನಿ ಬದುಕು ಆರಂಭಿಸಿದ್ದು 7ಓ’ಕ್ಲಾಕ್ ಚಿತ್ರದ ಮೂಲಕ.
ಇದನ್ನೂ ಓದಿ: ವಿವಾಹಿತ ಮಹಿಳೆಯ ಜತೆ ಪ್ರೀತಿಯಲ್ಲಿ ಬಿದ್ದ ರಾಜಮೌಳಿ; ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ ಈ ನಿರ್ದೇಶಕನ ಪ್ರೇಮಕಥೆ
Published On - 3:04 pm, Wed, 26 May 21