ಲೇಖನ: ಶಿವರಾಜ್ ಕುಮಾರ್ ಎನ್, ಟಿವಿ9
ಪ್ರಿಯ ಓದುಗರೇ.. ಇದೊಂದು ರಾಜಕೀಯ ಮಜಲುಗಳ ಸಾಂಗತ್ಯದ ಸ್ವಾರಸ್ಯಕರ ಸ್ಟೋರಿ ಅಲ್ಲ. ಕಣ್ಣೀರ ಒರಿಸಿ ಜೀವದ ಚಿಲುಮೆಯ ಬುಗ್ಗೆ ಪಸರಿಸುವ ಕಥೆಯಂತೂ ಅಲ್ಲವೇ ಅಲ್ಲ. ಆದರೆ ಇದೊಂದು ನಿಮ್ಮ ಭಾವವನ್ನ ಬಡಿದೆಬ್ಬಿಸುವ, ಭಾವನಾತ್ಮಕ ಸಂದೇಶವುಳ್ಳ ಪ್ರೀತಿಯ ಅಪ್ಪುಗೆಯ ನುಡಿಮುತ್ತು ಸಾರುವ ರಸವತ್ತಾದ ಕಥೆಯನ್ನ ಪೋಣಿಸುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನುತ್ತಲೇ ತನಗರಿವಿಲ್ಲದೇ ಕಣ್ಣೀರ ಧಾರೆ ಸುರಿಸುತ್ತಿರೋರು ಅದೆಷ್ಟೋ. ಕರುನಾಡು ಕಂಡ ಪರಮಾತ್ಮ ಇನ್ನಿಲ್ಲವಲ್ಲ ಅನ್ನುವ ನೋವು ವರುಷ ಉರಳಿದರೂ ಮಾಸುತ್ತಿಲ್ಲ. ಅಪ್ಪುವಿನ ಅಪ್ಪುಗೆ ಇಲ್ಲವಲ್ಲ ಅನ್ನೋ ಕೊರಗು ಇಡೀ ಕರುನಾಡಿಗಷ್ಟೇ ಅಲ್ಲ, ಇಡೀ ದೇಶವನ್ನೇ ಆವರಿಸಿದ್ದು ಸತ್ಯ. ಆ ಪುನೀತ ಪ್ರೇಮದ ಬೆಸುಗೆ ಕಳೆದುಕೊಂಡ ನೋವು ನಮಗೆ ನಿಮಗಷ್ಟೇ ಅಲ್ಲ, ಈ ರಾಜ್ಯದ ನಾಯಕ ಎನಿಸಿರೋ ಆ ವ್ಯಕ್ತಿಗೂ ಆಗಿದ್ದು ಸುಳ್ಳಲ್ಲ. ಗಂಧದ ಗುಡಿಯ ಮಹಲಿನಲ್ಲಿ ರಾಜಕುಮಾರ ಇನ್ನಿಲ್ಲ ಎಂಬ ವಾರ್ತೆ ಬರಸಿಡಲಂತೆ ಬಡಿದಿದ್ದಾಗಿನಿಂದ ಹಿಡಿದು ನವೆಂಬರ್ 1ರಂದು ರಾಜ್ಯದ ಅತ್ಯುನ್ನತ ‘ಕರ್ನಾಟಕ ರತ್ನ’ ಪ್ರಶಸ್ತಿಯವರೆಗೂ ಆ ವ್ಯಕ್ತಿ ಪುನೀತನ ಆರಾಧಕನಾಗಿರೋದು ವಿಶೇಷವೇ ಸರಿ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಅಪ್ಪು ಅಂತಿಮಯಾತ್ರೆಯನ್ನ ಅರ್ಥಪೂರ್ಣವಾಗಿಸಿದ ಸಿಎಂ ಬೊಮ್ಮಾಯಿ:
2021, ಅಕ್ಟೋಬರ್ 29 ಇಡೀ ಕರುನಾಡಿನ ಪಾಲಿಗೆ ಕರಾಳ ದಿನವಾಗಿತ್ತು. ನಗುವಿನ ಚಿಲುವೆ, ರಾಜ್ಯದ ರಾಜಕುಮಾರ ಹಠಾತ್ ಚಿರನಿದ್ದೆಗೆ ಜಾರಿಬಿಟ್ಟಿದ್ದ. ಇದೊಂದು ಕಾಲ್ಪನಿಕ, ನಿಜವಲ್ಲ ಅಂತಾ ಗೋಗರೆದವರೇ ಹೆಚ್ಚು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಕೂಡ ಈ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗಿಲ್ಲ. ಅಪ್ಪು ಬಾಳಪಯಣ ಮುಗಿಯಿತು ಅಂದಕೂಡಲೇ, ಅದಕ್ಕೊಂದು ಅರ್ಥಪೂರ್ಣವಾದ ವಿದಾಯವನ್ನ ನೆರವೇರಿಸಿದ್ದು ಮಾತ್ರ ಒಬ್ಬ ಪ್ರಬುದ್ಧ ಮುಖ್ಯಮಂತ್ರಿಯ ಭಾವನಾತ್ಮಕತೆಯನ್ನ ಪಸರಿಸಿತು. ಅಪ್ಪುಗೆ ಸಲ್ಲಬೇಕಾದ ಗೌರವಕ್ಕೆ ಕಿಂಚಿತ್ತೂ ದಕ್ಕೆಯಾಗದಂತೆ, ಗಂಧದ ನಾಡಿನ ರಾಜಕುಮಾರನಿಗೆ ಸಲ್ಲಬೇಕಾದ ಸಕಲ ಗೌರವಗಳೊಂದಿಗೆ ಅಂತಿಮ ವಿದಾಯವನ್ನ ನೆರವೇರಿಸಿದರು. ಅಭಿಮಾನಿ ದೇವರುಗಳು ಯುವರತ್ನನನ್ನ ಕಣ್ತುಂಬಿಕೊಳ್ಳಲು ಮೂರು ದಿನ ಅವಕಾಶ ಮಾಡಿಕೊಟ್ಟರು. ತನ್ನ ಮಗನಿಗಿಂತಲೂ ಹೆಚ್ಚಿನ ಪ್ರೀತಿ, ಮಮಕಾರ, ನೋವು, ಗೌರವ ಅಪ್ಪು ಮೇಲೆ ಬೊಮ್ಮಾಯಿಗಿದೆ ಅನ್ನೋದು ಅವತ್ತಿನ ಚಿತ್ರಣ ಸಾರಿಸಾರಿ ಹೇಳಿದ್ದು ಸುಳ್ಳಲ್ಲ. ಬೊಮ್ಮಾಯಿಯ ಪುನೀತ ಪ್ರೇಮ ಅಗಾಧವಾಗಿದೆ ಅನ್ನೋದಕ್ಕೆ ಅಪ್ಪು ಅಂತಿಮಯಾತ್ರೆಯ ಪಯಣವೇ ಸಾಕ್ಷಿಯಾಯ್ತು. ಯಾವುದೇ ಕಪ್ಪು ಚುಕ್ಕೆ ಬರದಂತೆ, ಗಲಾಟೆ ಗದ್ದಲವಾಗದಂತೆ ಸರ್ಕಾರದ ಭಾಗವನ್ನ ಎತ್ತಿತೋರಿಸಿದರು. ಅಭಿಮಾನಿಗಳಲ್ಲಿ ತಾನೊಬ್ಬ ಕೂಡ ಅಭಿಮಾನಿಯಾಗಿ ಕಂಬನಿ ಮಿಡಿದು ಭಾವುಕರಾದರು. ಅಪ್ಪುಗೆ ಕೈ ಮುಗಿದು, ಹಣೆಗೆ ಮುತ್ತಿಕ್ಕಿ ಹೋಗಿ ಬಾ ಕರ್ನಾಟಕದ ಹಿರಿಮೆ ಅಂತಾ ಕಳಿಸಿಕೊಟ್ಟರು. ಸರ್ಕಾರದ ಸಕಲ ಗೌರವಗಳೊಂದಿಗೆ ಅಪ್ಪುವಿಗೆ ಅರ್ಥಪೂರ್ಣ ವಿದಾಯ ನೀಡಿದರು. ಅಂದು ಸಿಎಂ ಬೊಮ್ಮಾಯಿ ನಡೆಗೆ ಇಡೀ ಕನ್ನಡಿಗರೇ ಶಹಬ್ಬಾಸ್ ಗಿರಿ ನೀಡಿದ್ದು ಉಂಟು. ಬಸವರಾಜ ಬೊಮ್ಮಾಯಿ ಒಬ್ಬ ಸಹೃದಯಿ, ಮಮತೆಯುಳ್ಳ ಮುಖ್ಯಮಂತ್ರಿ ಅನ್ನೋದನ್ನ ಜನಸಾಮಾನ್ಯರಿಗೆ ತೋರಿಸಿ, ತಮ್ಮ ಘನತೆಯನ್ನ ಮತ್ತಷ್ಟು ಹೆಚ್ಚಿಸಿಕೊಂಡರು.
ದೊಡ್ಮನೆ ಕುಟುಂಬದೊಂದಿಗೆ ಸದಾ ಬೆನ್ನೆಲುಬಾಗಿ ನಿಂತುಕೊಂಡ ಬೊಮ್ಮಾಯಿ:
ಪುನೀತ್ ಮೇಲಿನ ಮಮಕಾರ, ಪ್ರೀತಿ, ಗೌರವ ಮುಖ್ಯಮಂತ್ರಿ ಬೊಮ್ಮಾಯಿಯಲ್ಲಿ ಸದಾ ಕಾಣಿಸುತ್ತಲೇ ಇತ್ತು. ಅಪ್ಪು ಅಗಲಿಕೆಯ ನಂತರ ದೊಡ್ಮನೆಯ ಪ್ರತಿಯೊಂದು ಕಾರ್ಯಕ್ಕೂ ತೆರೆಹಿಂದಿನ ಶಕ್ತಿಯೂ ಕೂಡ ಆಗಿದ್ದು ಇದೇ ಬೊಮ್ಮಾಯಿ. ಅಪ್ಪುವಿನ ಬಾಳಪಯಣ ಯುವಕರಿಗಷ್ಟೇ ಅಲ್ಲ ನಮ್ಮೆಲ್ಲರಿಗೂ ಮಾದರಿ ಅಂತಾ ಪದೇ ಪದೇ ಪ್ರತಿ ಕಾರ್ಯಕ್ರಮದಲ್ಲೂ ಸಾರಿದರು. ಪುನೀತ್ ಸಂಬಂಧಿಸಿದ ಪ್ರತಿ ಕಾರ್ಯಕ್ರಮ ಆಯೋಜನೆಗೂ ದೊಡ್ಮನೆ ಕುಟುಂಬಕ್ಕೆ ದೊಡ್ಡಶಕ್ತಿಯಾಗಿ ನಿಂತುಕೊಂಡವರು ಇದೇ ಬೊಮ್ಮಾಯಿ. ಯುವಕರಿಗೆ ಮುಂದಿನ ಪೀಳಿಗೆಗೆ ಪುನೀತ ಬದುಕಿನ ಸಾರ್ಥಕತೆ ಎಷ್ಟು ಮುಖ್ಯ ಅನ್ನೋದನ್ನ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಮೆಲುಕು ಹಾಕಿದರು.
ಗಂಧದ ಗುಡಿಯಲ್ಲಿ ಅರಳಿತು ಪುನೀತ ಪರ್ವದ ಪ್ರೇಮದ ಚಿಲುಮೆ:
ಡಾ. ಪುನೀತ್ ರಾಜ್ಕುಮಾರ್ ಮೇಲೆ ಸಿಎಂ ಬೊಮ್ಮಾಯಿಗೆ ಅಗಾಧವಾದ ಪ್ರೇಮವಿದೆ, ಪ್ರೀತಿಯಿದೆ. ತಾಯಿಯಷ್ಟೇ ವಾತ್ಸಲ್ಯ ಮಮತೆ ಇದೆ ಅನ್ನೋದನ್ನ ಪ್ರತಿಬಾರಿಯೂ ಪ್ರೂ ಮಾಡುತ್ತಲೇ ಬರುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳು. ಇತ್ತೀಚಿಗಷ್ಟೇ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲೂ ಅಪ್ಪು ಅಜರಾಮರ ಅನ್ನೋದನ್ನ ಲಕ್ಷಾಂತರ ಅಭಿಮಾನಿಗಳ ಮುಂದೆ ಸಾರಿದರು. ಗಂಧದ ಗುಡಿ ಸಿನಿಮಾಗೆ ಹರಿಸಿ ಹಾರೈಸಿದ್ದಲ್ಲದೇ, ನಿಸರ್ಗ ಕಥಾಹಂದರವುಳ್ಳ ಈ ಸಿನಿಮಾಗೆ ಟ್ಯಾಕ್ಸ್ ಫ್ರೀ ಅಂತಾನೂ ಘೋಷಿಸಿ ಎಲ್ಲರೂ ಸಿನಿಮಾ ನೋಡಿ ಎಂದರು. ಅಷ್ಟರಮಟ್ಟಿಗೆ ಅಪ್ಪು ಮೇಲೆ ತನಗೆಷ್ಟು ಅಗಾಧವಾದ ಪ್ರೀತಿಯಿದೆ ಅನ್ನೋದನ್ನ ಮತ್ತೊಮ್ಮೆ ತೋರಿಸಿಕೊಟ್ಟರು.
ಪುನೀತ್ ಹೆಸರಲ್ಲಿ ಸ್ಯಾಟ್ ಲೈಟ್ ಉದ್ಘಾಟಿಸಿ ಗೌರವ ಸಮರ್ಪಿಸಿದ ಸಿಎಂ
ಅಪ್ಪು ನಮ್ಮನ್ನೆಲ್ಲ ಅಗಲಿ ಸಂವತ್ಸರ ಕಳೆದರೂ ಎಲ್ಲರ ಮನೆಮನದಲ್ಲೂ ಎಂದೆಂದಿಗೂ ಅಜರಾಮರ ಎನ್ನುತ್ತಲೇ ಮತ್ತೊಂದು ವಿಶೇಷವಾದ ಗೌರವವನ್ನ ಸಮರ್ಪಿಸಿದರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಅಪ್ಪು ಹೆಸರಿನಲ್ಲಿ ಪುನೀತ್ ಸ್ಯಾಟ್ ಲೈಟ್ ಉದ್ಘಾಟಿಸಿದರು. ಅವರ ಹೆಸರಿನಲ್ಲಿ ದೊಡ್ಡಮಟ್ಟದ ಸ್ಯಾಟ್ ಲೈಟ್ ಮಾಡುವುದಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎನ್ನುತ್ತಿದ್ದಾರೆ. ಹರಿಕೋಟಾದಿಂದ ಜನವರಿ ವೇಳೆಗೆ ಪುನೀತ್ ಹೆಸರಲ್ಲಿ ಸ್ಯಾಟ್ ಲೈಟ್ ಲಾಂಚ್ ಮಾಡುವ ಮೂಲಕ ಅಪ್ಪುಗೆ ಮತ್ತೊಂದು ವಿಶೇಷವಾದ ಗೌರವದೊಂದಿಗೆ ಆಕಾಶದೆತ್ತರಕ್ಕೂ ಕೊಂಡೊಯ್ಯೂತ್ತಿದ್ದಾರೆ ಬೊಮ್ಮಾಯಿ.
ಅಭಿಮಾನಿಗಳ ದೇವರಿಗೆ ‘ಕರ್ನಾಟಕ ರತ್ನ’ ಕಿರೀಟ:
ಬೊಮ್ಮಾಯಿ ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲಿಗೆ ಹೆಚ್ಚು ಆಧ್ಯತೆ ನೀಡಿದ್ದೇ ಸಹೃದಕ್ಕೆ. ಅಪ್ಪು ಅಭಿಮಾನದ ಕಿರೀಟಕ್ಕೆ ತಡಮಾಡದೇ ನೀಡಿದ್ದು ಕರ್ನಾಟಕ ರತ್ನದ ಮುಕುಟ. ಅಭಿಮಾನಿಗಳ ಪಾಲಿನ ನಿಜವಾದ ಆರಾಧ್ಯದೈವರಾದ ಪುನೀತ್ ಗೆ ಸತ್ತಮೇಲೂ ಸಾರ್ಥಕತೆಯ ಗೌರವ ಕಲ್ಪಿಸಿಕೊಟ್ಟಿದ್ದು ಮುಖ್ಯಮಂತ್ರಿಗಳಾದ ಬೊಮ್ಮಾಯಿ. ಅಪ್ಪು ಒಬ್ಬ ಕಲಾವಿದನಾಗಿ ಅಷ್ಟೇ ಅಲ್ಲ, ಸಮಾಜಮುಖಿಯ ನಾಯಕ ಅಂತಾ ಬೊಮ್ಮಾಯಿಗೆ ಅರಿವಾಗಿತ್ತು. ಹೀಗಾಗಿಯೇ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನ ಮತ್ತಷ್ಟು ವೈಭವಕ್ಕೆ ಕೊಂಡೊಯ್ಯಲು ಡಾ. ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪ್ರಧಾನ ಮಾಡಲಾಗುತ್ತಿದೆ. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಗಣ್ಯರೊಬ್ಬರಿಂದ ಪುನೀತ್ಗೆ ಕರ್ನಾಟಕ ರತ್ನ ಕಿರೀಟ ತೊಡಿಸುತ್ತಿದ್ದಾರೆ. ಆ ಮೂಲಕ ಬೊಮ್ಮಾಯಿಯ ಪುನೀತ ಪ್ರೇಮ ಪಸರಿಸುತ್ತಲೇ ಇದೆ. ಒಬ್ಬ ಅಭಿಮಾನಿ ಅಪ್ಪುವನ್ನ ಎಷ್ಟು ಆರಾಧಿಸುತ್ತಾನೋ, ಅದಕ್ಕಿಂತಲೂ ಅಗಾಧವಾದ ಪ್ರೀತಿಯನ್ನ ತಮ್ಮ ಭಾವನಾತ್ಮಕ ಬೆಸುಗೆಯಿಂದ ಪೋಣಿಸುತ್ತಲೇ ಇದ್ದಾರೆ ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಸೋಮಪ್ಪ ಬೊಮ್ಮಾಯಿ.
ಶಿವರಾಜ್ ಕುಮಾರ್ ಎನ್., ಟಿವಿ9
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.