
ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಕಮಲ್ ಹಾಸನ್, ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿರುವ ಮಾತುಗಳು ವಿವಾದದ ಸ್ವರೂಪ ಪಡೆದುಕೊಂಡಿವೆ. ಕಮಲ್ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಂತೆ ತಡೆಯುವುದಾಗಿ ಘೋಷಿಸಿವೆ. ಸಿನಿಮಾ ಜೂನ್ 05 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾಕ್ಕೆ ಪ್ರತಿಕ್ರಿಯೆ ಹೇಗಿದೆ? ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದರಿಂದ ನಿರ್ಮಾಪಕರಿಗೆ ಆಗುತ್ತಿರುವ ನಷ್ಟ ಎಷ್ಟು?
‘ಥಗ್ ಲೈಫ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಚೆನ್ನೈ, ಹೈದರಾಬಾದ್, ಮುಂಬೈ, ಡೆಲ್ಲಿ, ಕೊಚ್ಚಿ ಇನ್ನಿತರೆ ಪ್ರಮುಖ ನಗರಗಳಲ್ಲಿ ಓಪನ್ ಆಗಿದೆ. ಬುಕ್ಮೈ ಶೋ ಮಾಹಿತಿ ಪ್ರಕಾರ ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿಯೂ ಈ ವರೆಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ.
ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅಸಾಧ್ಯ ಎಂಬಂಥಾ ವಾತಾವರಣ ಇದೆ. ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗದಿದ್ದಲ್ಲಿ ಸುಮಾರು 25-30 ಕೋಟಿ ನಷ್ಟ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಆಗಲಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾಗಳು ಒಳ್ಳೆಯ ಪ್ರದರ್ಶನ ತೋರಿದ ಸಾಕಷ್ಟು ಇತಿಹಾಸವಿದೆ. ಕಮಲ್ ಹಾಸನ್ ಅವರ ನಟನೆಯ ಈ ಹಿಂದಿನ ಸೂಪರ್ ಹಿಟ್ ಸಿನಿಮಾ ‘ವಿಕ್ರಂ’ ಕರ್ನಾಟಕದಲ್ಲಿ 26 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಥಗ್ ಲೈಫ್’ ಸಿನಿಮಾ ಇನ್ನೂ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಕಮಲ್ ಅವರ ಒಂದು ಹೇಳಿಕೆಯಿಂದ ಎಲ್ಲವೂ ಉಲ್ಟಾ ಹೊಡೆದಿದೆ.
ಈಗ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿರುವ ನಗರಗಳಲ್ಲಿ ಸಿನಿಮಾಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವತಃ ಚೆನ್ನೈನಲ್ಲಿಯೇ ಅಡ್ವಾನ್ಸ್ ಬುಕಿಂಗ್ ನೀರಸವಾಗಿದೆ. ತಮಿಳಿನ ಇತರೆ ಕೆಲವು ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ‘ಥಗ್ ಲೈಫ್’ ಸಿನಿಮಾಕ್ಕೆ ಅಷ್ಟೇನೂ ಆರಂಭಿಕ ಪ್ರತಿಕ್ರಿಯೆ ಪ್ರೇಕ್ಷಕರಿಂದ ದೊರಕಿಲ್ಲ. ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ಶೋಗಳು ಸಿಕ್ಕಿವೆಯಾದರೂ ಅಡ್ವಾನ್ಸ್ ಬುಕಿಂಗ್ ಸಾಧಾರಣ ಎಂಬುವಷ್ಟು ಮಾತ್ರವೇ ಆಗಿದೆ.
ಇದನ್ನೂ ಓದಿ:‘ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ?’; ಕಮಲ್ ಹಾಸನ್ಗೆ ಕೋರ್ಟ್ ತರಾಟೆ
ಇನ್ನು ತಮಿಳು ಸಿನಿಮಾಗಳ ಎರಡನೇ ದೊಡ್ಡ ಮಾರುಕಟ್ಟೆ ಹೈದರಾಬಾದ್ನಲ್ಲಿಯೂ ಸಹ ನೀರಸ ಪ್ರತಿಕ್ರಿಯೆಯೇ ಇದೆ. ‘ಥಗ್ ಲೈಫ್’ ಸಿನಿಮಾದ ತೆಲುಗು ಆವೃತ್ತಿಗೆ ಹೈದರಾಬಾದ್ನಲ್ಲಿ ಸಾಕಷ್ಟು ಶೋಗಳು ಸಿಕ್ಕಿವೆಯಾದರೂ ಈ ವರೆಗೆ (ಮಂಗಳವಾರ) ಹೌಸ್ ಫುಲ್ ಆಗಿರುವುದು ಕೇವಲ ಮೂರು ಶೋ ಮಾತ್ರ. ಇನ್ನು ಮುಂಬೈನಲ್ಲಿ ಅಂತೂ ಒಂದೂ ಶೋ ಈ ವರೆಗೆ ಹೌಸ್ಫುಲ್ ಆಗಿಲ್ಲ. ಮುಂಬೈನಲ್ಲಿ ತಮಿಳು ಆವೃತ್ತಿ ಸಹ ಬಿಡುಗಡೆ ಆಗುತ್ತಿದೆ. ಆದರೆ ತಮಿಳು ಶೋಗಳು ಸಹ ಮುಂಗಡವಾಗಿ ಬುಕ್ ಆಗಿಲ್ಲ. ಕೊಚ್ಚಿಯಲ್ಲಿ ‘ಥಗ್ ಲೈಫ್’ ಸಿನಿಮಾಕ್ಕೆ ಹೆಚ್ಚಿನ ಶೋಗಳೇ ದೊರೆತಿಲ್ಲ.
‘ಥಗ್ ಲೈಫ್’ ಸಿನಿಮಾ ಅನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಕಮಲ್ ಜೊತೆಗೆ ಸಿಂಭು, ತ್ರಿಷಾ ಕೃಷ್ಣನ್, ಅಭಿರಾಮಿ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಸ್ವತಃ ಕಮಲ್ ಹಾಸನ್ ಹಾಗೂ ಮಣಿರತ್ನಂ ಅವರುಗಳು ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Tue, 3 June 25