ರಾಜ್ಯದಲ್ಲಿ ‘ಥಗ್ ಲೈಫ್’ ಬಿಡುಗಡೆ ಇಲ್ಲ, ಹೈಕೋರ್ಟ್ಗೆ ವಕೀಲರ ಮಾಹಿತಿ
Thug Life movie: ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವಿವಾದ ನ್ಯಾಯಾಲಯ ತಲುಪಿದ್ದು, ರಾಜ್ಯ ಹೈಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಸಿದೆ. ಕಮಲ್ ಹೇಳಿಕೆ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೆ, ನಿರ್ಮಾಪಕರು ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಎಂದು ಕಮಲ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಮಲ್ ಹಾಸನ್ (Kamal Haasan) ಹೇಳಿಕೆಯಿಂದ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಇಕ್ಕಟ್ಟಿಗೆ ಸಿಲುಕಿದ್ದು, ಇದೀಗ ಸಿನಿಮಾ ನಿರ್ಮಾಪಕರೇ ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಭದ್ರತೆ ಕೊಡಿಸುವಂತೆ ಒತ್ತಾಯಿಸಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಮಲ್ ಅವರ ಹೇಳಿಕೆಯನ್ನು ವಿರೋಧಿಸಿದ್ದು, ಕ್ಷಮೆ ಕೇಳುವುದಕ್ಕೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತ್ತು. ಇದೀಗ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ‘ಥಗ್ ಲೈಫ್’ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ ಎಂದಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದೀಗ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.
ಇಂದು (ಮೇ 03) ಬೆಳಿಗ್ಗೆ ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ, ‘ನಿಮ್ಮ ಹೇಳಿಕೆಗೆ ಸಾಕ್ಷಿ ಒದಗಿಸಿ’ ಎಂದಿದ್ದರು. ಬಳಿಕ, ‘ಜನರ ಭಾವನೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ನೀವು ತಪ್ಪು ಮಾಡಿ, ಅದರ ಸಮರ್ಥನೆಗೆ ನಿಂತಿದ್ದೀರ, ತಪ್ಪು ಮಾಡಿ ನಮಗೆ ರಕ್ಷಣೆ ಕೊಡಿ ಎಂದರೆ ಹೇಗೆ ಸಾಧ್ಯ’ ಎಂದಿದ್ದರು. ಬಳಿಕ ಮಧ್ಯಾಹ್ನದ ವೇಳೆಗೆ ಅಭಿಪ್ರಾಯ ತಿಳಿಸುವಂತೆ ಕಾಲಾವಕಾಶ ನೀಡಿದ್ದರು.
ಮಧ್ಯಾಹ್ನ ವಿಚಾರಣೆ ನಡೆದಾಗ ಕಮಲ್ ಪರ ವಕೀಲರು ವಾದ ಮಂಡಿಸಿ, ಕಮಲ್ ಹಾಸನ್ ಅವರು ಫಿಲಂ ಚೇಂಬರ್ಗೆ ಇಂದು ಬರೆದಿರುವ ಪತ್ರವನ್ನು ಓದಿ ಹೇಳಿ, ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ತಮಿಳಿನಂತೆ ಕನ್ನಡ ಕೂಡಾ ಶ್ರೀಮಂತ ಭಾಷೆ…. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ. ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಮಲ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.
ಇದನ್ನೂ ಓದಿ:ಕನ್ನಡಿಗರ ಬಗ್ಗೆ ಪ್ರೀತಿ-ವಿಶ್ವಾಸ ಇದೆ, ಲೆಕ್ಚರ್ ಕೊಟ್ಟ ಕಮಲ್ ಹಾಸನ್
ಆದರೆ ನ್ಯಾಯಮೂರ್ತಿಗಳು, ‘ಎಲ್ಲವೂ ಸರಿಯಿದೆ ಆದರೆ ಇದಕ್ಕೆ ಒಂದು ಪದ ಸೇರಿಸಬೇಕು’ ಎಂದು ಪರೋಕ್ಷವಾಗಿ ಕಮಲ್ ಕ್ಷಮೆ ಕೇಳಿಲ್ಲ ಎಂದರು. ಅದಕ್ಕೆ ಕಮಲ್ ಪರ ವಕೀಲರು, ಕ್ಷಮೆ ಕೇಳಿದರೆ ಎಲ್ಲವೂ ಸರಿ ಹೋಗಲಿದೆ, ದರೆ ಕಮಲಹಾಸನ್ ಗೆ ಯಾವುದೇ ದುರುದ್ದೇಶವಿರಲಿಲ್ಲ…. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ, ಕನ್ನಡದ ಪರ ಅವರ ಒಲವನ್ನು ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದಮೇಲೆ ಒಂದು ಪದ ಸೇರಿಸುವ ಒತ್ತಡ ಇರಬಾರದು’ ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಒತ್ತಾಯವಲ್ಲ, ಆದರೆ ಬೀಟಿಂಗ್ ಅರೌಂಡ್ ದಿ ಬುಷ್’ ಬೇಡ. ಕ್ಷಮೆ ಕೇಳಲು ಆತ್ಮಪ್ರತಿಷ್ಠೆ ಅವರಿಗೆ ಅಡ್ಡ ಬರುತ್ತಿರಬಹುದು ಆದರೆ ಅವರು ಜನರ ಮನಸ್ಸಿಗೆ ನೋವು ಮಾಡಿರುವುದು ಖಾತ್ರಿ. ಆ ಅಧಿಕಾರ ಯಾರಿಗೂ ಇಲ್ಲ’ ಎಂದರು. ಆದರೆ ಕಮಲ್ ಪರ ವಕೀಲ ಧ್ಯಾನ್ ಚಿನ್ನಪ್ಪ, ‘ನಾನೇ ಖುದ್ದಾಗಿ ಕಮಲ್ ಜೊತೆ ಮಾತನಾಡಿದ್ದೇನೆ, ಅವರಿಗೆ ಯಾವುದೇ ದುರುದ್ದೇಶ ಇಲ್ಲ, ಹಾಗಾಗಿ ಅವರು ಕ್ಷಮೆ ಕೇಳಲು ಬಯಸುತ್ತಿಲ್ಲ’ ಎಂದರು.
ಅಂತಿಮವಾಗಿ, ‘ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ಅನ್ನು ಕರ್ನಾಟಕದಲ್ಲಿ ಈಗ ಬಿಡುಗಡೆ ಮಾಡಲು ಬಯಸುತ್ತಿಲ್ಲ, ಈ ಘಟನೆ ವಿಷಯವಾಗಿ ಫಿಲಂ ಚೇಂಬರ್ ಜೊತೆಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆ’ ಎಂದರು. ವಿಚಾರಣೆಯನ್ನು ಜುಲೈ 10ಕ್ಕೆ ನ್ಯಾಯಾಲಯ ಮುಂದೂಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




