ಸ.ಹಿ.ಪ್ರಾ. ಶಾಲೆ ರೀತಿ ಇನ್ನೊಂದು ಸಿನಿಮಾ ‘ಗುರಿ’; ಇದು ಸರ್ಕಾರಿ ಶಾಲೆಯ ಕಥೆ
ಸರ್ಕಾರಿ ಶಾಲೆ ಉಳಿಸಲು ಮಕ್ಕಳು ಹೋರಾಡುವ ಕಥೆಯನ್ನು ಇಟ್ಟುಕೊಂಡು ‘ಗುರಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ ಆಗಿದೆ. ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ‘ಎಂಆರ್‌ಟಿ ಮ್ಯೂಸಿಕ್’ ಮೂಲಕ ಚಿತ್ರದ ಹಾಡು ರಿಲೀಸ್ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ‘ಗುರಿ’ ತಂಡದವರು ಭಾಗಿಯಾಗಿದ್ದರು.

‘ಗುರಿ’ (Guri) ಎಂದ ಕೂಡಲೇ ಡಾ. ರಾಜ್ಕುಮಾರ್ ನಟನೆಯ ಸಿನಿಮಾ ನೆನಪಾಗುತ್ತದೆ. ಈಗ ಅದೇ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸಿದ್ಧವಾಗಿದೆ. ವಿಶೇಷ ಏನೆಂದರೆ, ಈ ಟೈಟಲ್ಗೆ ‘ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಟ್ಯಾಗ್ ಲೈನ್ ಇದೆ. ಸೆಲ್ವಂ ಮಾದಪ್ಪನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಛಾಯಾಗ್ರಹಣವನ್ನು ಕೂಡ ಸೆಲ್ವಂ ಮಾದಪ್ಪನ್ ಅವರೇ ನಿಭಾಯಿಸಿದ್ದಾರೆ. ‘ವಿಷ್ಣುದುರ್ಗಾ ಪ್ರೊಡಕ್ಷನ್’ ಮೂಲಕ ರಾಧಿಕಾ ಎಸ್.ಆರ್. ಮತ್ತು ಚಿತ್ರಲೇಖಾ ಎಸ್. ಅವರು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ (Kannada Cinema) ಹಾಡು ಮತ್ತು ಟೀಸರ್ ಬಿಡುಗಡೆ ಆಯಿತು.
ಲಹರಿ ವೇಲು ಅವರ ‘ಎಂಆರ್‌ಟಿ ಮ್ಯೂಸಿಕ್’ ಮೂಲಕ ‘ಗುರಿ’ ಸಿನಿಮಾದ ಸಾಂಗ್ ಬಿಡುಗಡೆ ಆಗಿದೆ. ಪಳನಿ ಡಿ. ಸೇನಾಪತಿ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರ ಪ್ರಮುಖ ಪಾತ್ರಗಳಲ್ಲಿ ಮಹಾನಿಧಿ, ಜೀವಿತ್ ಭೂಷಣ್, ಅಚ್ಯುತ್ ಕುಮಾರ್, ಜಯಶ್ರೀ, ಉಗ್ರಂ ಮಂಜು, ಸಂದೀಪ್ ಮಲಾನಿ, ಮನೋಹರ್ ಮುಂತಾದವರು ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಭಾಗಿಯಾಗಿದ್ದರು.
ಅಂದಹಾಗೆ, ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ನಿರ್ದೇಶಕ ಸೆಲ್ವಂ ಮಾದಪ್ಪನ್ ಹೇಳಿದ್ದಾರೆ. ಕೋಲಾರದ ತೇರಳ್ಳಿ ಬೆಟ್ಟದ ಕಡೆ ಹೋಗಿದ್ದಾಗ ಅಲ್ಲಿನ ಸರ್ಕಾರಿ ಶಾಲೆಯನ್ನು ಮುಚ್ಚಲಾಗಿತ್ತು. ಸ್ಥಳೀಯರನ್ನು ವಿಚಾರಿಸಿದಾಗ ನಿರ್ದೇಶಕರಿಗೆ ಕೆಲವು ಅಂಶಗಳು ಸಿಕ್ಕವು. ಅದನ್ನೇ ಇಟ್ಟುಕೊಂಡು ‘ಗುರಿ’ ಸಿನಿಮಾ ಮಾಡಲಾಗಿದೆ.
‘ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷ ಮುಂತಾದವು ಈ ಸಿನಿಮಾದಲ್ಲಿವೆ. ಸರ್ಕಾರಿ ಶಾಲೆ ಮುಚ್ಚುವ ಹಂತ ಬರುತ್ತದೆ. ಆಗ 3ನೇ ತರಗತಿಯ ಇಬ್ಬರು ಬುದ್ಧಿವಂತ ವಿದ್ಯಾರ್ಥಿಗಳು ಹೋರಾಟ ಮಾಡುತ್ತಾರೆ’ ಎಂದು ಸಿನಿಮಾದ ಕಥೆಯ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿದರು. ಸೂಪರ್ ಹಿಟ್ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸಿನಿಮಾದಲ್ಲಿ ಕೂಡ ಇದೇ ರೀತಿಯ ಕಹಾನಿ ಇತ್ತು. ಸರ್ಕಾರಿ ಶಾಲೆಯ ಉಳಿವಿಗಾಗಿ ಮಕ್ಕಳು ಪ್ರಯತ್ನಿಸುವ ಕಥೆ ಈ ಸಿನಿಮಾದಲ್ಲಿದೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಉಚಿತವಾಗಿ ಸಿನಿಮಾ ತೋರಿಸ್ತೀನಿ: ಆಮಿರ್ ಖಾನ್ ಘೋಷಣೆ
ಟಿ.ಎಸ್. ನಾಗಾಭರಣ, ಪವನ್ ಕುಮಾರ್, ಅವಿನಾಶ್, ಚಂದ್ರಪ್ರಭಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಅರವಿಂದ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಕೋಲಾರ, ತೇರಳ್ಳಿ ಬೆಟ್ಟ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ. ಚಿತ್ರತಂಡಕ್ಕೆ ಲಹರಿ ವೇಲು ಅವರು ಶುಭ ಕೋರಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








