ಟೈಗರ್ ಪ್ರಭಾಕರ್ (Tiger Prabhakar) ಕನ್ನಡ ಚಿತ್ರರಂಗದ (Sandalwood) ದಿಗ್ಗಜ ನಟರಲ್ಲಿ ಒಬ್ಬರು. ವಿಲನ್ ಆಗಿ, ಪೋಷಕ ನಟನಾಗಿ, ನಾಯಕ ನಟನಾಗಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಟೈಗರ್ ಪ್ರಭಾಕರ್ ನಟನೆಗೆ, ಫೈಟ್ಗಳಿಗೆ ದೊಡ್ಡ ಅಭಿಮಾನಿ ವರ್ಗ ಆಗಲೇ ಸೃಷ್ಟಿಯಾಗಿತ್ತು. ಟೈಗರ್ ಪ್ರಭಾಕರ್ ಅವರ ನಟನಾ ಜೀವನದಂತೆ ಖಾಸಗಿ ಜೀವನವೂ ರಂಗು-ರಂಗಾಗಿತ್ತು. ಪ್ರಭಾಕರ್ ಅವರಿಗೆ ಮೂವರು ಪತ್ನಿಯರು, ಐವರು ಮಕ್ಕಳು. ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಈಗಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತಂದೆಯವರ ಹಾದಿಯಲ್ಲಿಯೇ ಚಿತ್ರರಂಗದಲ್ಲಿ ಸಾಗುತ್ತಿದ್ದಾರೆ. ಆದರೆ ಟೈಗರ್ ಪ್ರಭಾಕರ್ ಅವರ ಮಕ್ಕಳಿಗೆ ಪರಸ್ಪರರಿಗೆ ಆಗಿಬರುವುದಿಲ್ಲ ಎಂಬ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಹರಿದಾಡಿತ್ತು. ಅದನ್ನು ಸುಳ್ಳು ಮಾಡಿ ವಿನೋದ್ (Vinod Prabhakar) ಹಾಗೂ ಅವರ ಸಹೋದರಿ ಸೌಂದರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಟೈಗರ್ ಪ್ರಭಾಕರ್ ಅವರ ಮೊದಲ ಪತ್ನಿಯ ಮಗ ವಿನೋದ್ ಪ್ರಭಾಕರ್ ಆಗಿದ್ದರೆ, ಎರಡನೇ ಪತ್ನಿ ಮಗಳು ಸೌಂದರ್ಯಾ ಜಯಮಾಲಾ ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರಿಗೂ ಪರಸ್ಪರರ ಮೇಲೆ ಅಸಮಾಧಾನ, ಹಗೆ ಎಂಬು ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರಿ ಟೈಗರ್, ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ. ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ, ಒಟ್ಟಿಗೆ ಆಡುತ್ತಾ ಬೆಳೆದ ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದರು. ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಅವರ ಸಂಬಂಧವೇನು ಹಳಸಿರಲಿಲ್ಲ. ಈಗ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ:ಟೈಗರ್ ಪ್ರಭಾಕರ್ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್ಗೆ ಪ್ರಭಣ್ಣನ ನೆನಪು
ವಿನೋದ್ ಹಾಗೂ ಸೌಂದರ್ಯ ಇಂದಿಗೂ ಅಣ್ಣ ತಂಗಿಯೇ. ಆದರೆ ಕೆಲವರು ಅವರಿಬ್ಬರನ್ನು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಸಮಯ-ಸಂದರ್ಭ ಹಳೆಯ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ. ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ. ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಬಾಲ್ಯದ ಆಟ-ತುಂಟಾಟ ನೆನಪು ಮಾಡಿಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ ಎಂಬುದನ್ನು ಚಿತ್ರಗಳು ಸಾಬೀತುಪಡಿಸಿವೆ.
ಟೈಗರ್ ಪ್ರಭಾಕರ್ ಅವರ ಮೊದಲಿಗೆ ಅಲ್ಫೋನ್ಸೋ ಮೇರಿ ಎಂಬುವರನ್ನು ವಿವಾಹವಾದರು. ಅವರಿಗೆ ಭಾರತಿ, ಗೀತಾ ಹಾಗೂ ವಿನೋದ್ ಪ್ರಭಾಕರ್ ಅವರುಗಳು ಮಕ್ಕಳು. ಬಳಿಕ ಆಗಿನ ಸ್ಟಾರ್ ನಟಿ ಜಯಮಾಲಾ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ಅವರಲ್ಲೊಬ್ಬರು ನಟಿ ಸೌಂದರ್ಯಾ ಜಯಮಾಲಾ. ಅದಾದ ಬಳಿಕ ಬಹಳ ಕಿರಿಯ ವಯಸ್ಸಿನ ಅಂಜು ಎಂಬುವರನ್ನು ವಿವಾಹವಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ