
ಕನ್ನಡದಲ್ಲಿ ‘ಟೈಮ್ ಪಾಸ್’ ಸಿನಿಮಾ (Time Pass Kannada Movie) ಬಿಡುಗಡೆಗೆ ಸಿದ್ಧವಾಗಿದೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಈ ಚಿತ್ರ ಗಮನ ಸೆಳೆದಿತ್ತು. ಚೇತನ್ ಜೋಡಿದಾರ್ (Chethan Jodidhar) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್ ಬಳಿಕ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಲು ಟೀಸರ್ (Time Pass Movie Teaser) ಕೂಡ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಈ ಟೀಸರ್ನಲ್ಲಿ ಸಿನಿಮಾದ ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಇದರ ಜೊತೆಗೆ ‘ಟೈಮ್ ಪಾಸ್’ ಸಿನಿಮಾದ ಬಿಡುಗಡೆ ದಿನಾಂಕವನ್ನೂ ತಿಳಿಸಲಾಗಿದೆ. ಅಕ್ಟೋಬರ್ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಬೇಕು ಎಂಬುದು ‘ಟೈಮ್ ಪಾಸ್’ ಸಿನಿಮಾ ತಂಡದ ಉದ್ದೇಶ. ಪೋಸ್ಟರ್ನಲ್ಲಿ ‘100 ಪರ್ಸೆಂಟ್ ಮನರಂಜನೆ’ ಎಂಬ ಲೈನ್ ಗಮನ ಸೆಳೆದಿದೆ. ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದಂತಿರುವ ಕಥೆ ಈ ಚಿತ್ರದಲ್ಲಿ ಇರಲಿದೆ ಎಂಬುದನ್ನು ಟೀಸರ್ ಮೂಲಕ ಸೂಚಿಸಲಾಗಿದೆ. ಚೇತನ್ ಜೋಡಿದಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ ಇದು.
ಈವರೆಗೂ ಯಾವುದೇ ನಿರ್ದೇಶಕರ ಬಳಿಯೂ ಚೇತನ್ ಜೋಡಿದಾರ್ ಅವರು ಕೆಲಸ ಮಾಡಿಲ್ಲ. ಆ ರೀತಿಯ ಅನುಭವ ಇಲ್ಲದಿದ್ದರೂ ಸಹ ಅವರ ಸಿನಿಮಾ ಮೇಲಿನ ಆಸಕ್ತಿಯಿಂದ ಸ್ವತಃ ಎಲ್ಲವನ್ನೂ ಕಲಿತುಕೊಂಡು ‘ಟೈಮ್ ಪಾಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತಮ್ಮ ಸಿನಿಮಾ ಕಂಟೆಂಟ್ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಸುವ ರೀತಿಯಲ್ಲಿ ಅವರು ಟೀಸರ್ ಬಿಡುಗಡೆ ಮಾಡಿದ್ದಾರೆ.
ಟೀಸರ್ ನೋಡಿದ ಬಳಿಕ ಸಿನಿಪ್ರಿಯರಿಗೆ ‘ಟೈಮ್ ಪಾಸ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಸಿನಿಮಾದ ಆಡಿಯೋ ಹಕ್ಕುಗಳ ಬಗ್ಗೆಯೂ ಚಿತ್ರತಂಡ ಒಂದು ಸುದ್ದಿ ಹಂಚಿಕೊಂಡಿದೆ. ‘ಸರೆಗಮ ಕನ್ನಡ’ ಕಂಪನಿಗೆ ‘ಟೈಮ್ ಪಾಸ್’ ಚಿತ್ರದ ಆಡಿಯೋ ಹಕ್ಕುಗಳು ಮಾರಾಟ ಆಗಿವೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನಲ್ ಮೂಲಕ ಹಾಡುಗಳು ಲಭ್ಯ.
ಇದನ್ನೂ ಓದಿ: 98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆ
ಇಮ್ರಾನ್ ಪಾಷಾ, ರತ್ಷಾರಾಮ್, ವೈಸಿರಿ ಕೆ. ಗೌಡ, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ನವೀನ್ ಕುಮಾರ್, ಪ್ರಭಾಕರ್ ರಾವ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಗಿರೀಶ್ ಗೌಡ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ವೈಷ್ಣವಿ ಸತ್ಯನಾರಾಯಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಜೀವ್ ಗಣೇಶ್ ಅವರು ಛಾಯಾಗ್ರಹಣ ಹಾಗೂ ಹರಿ ಪರಮ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಡಿ.ಎಂ. ಉದಯ ಕುಮಾರ್ ಅವರು ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.