Salaga: ಸಖತ್ ಸೌಂಡ್ ಮಾಡ್ತಿದೆ ‘ಟಿಣಿಂಗಾ ಮಿಣಿಂಗಾ ಟಿಶ್ಶಾ’; ಈ ಹಾಡಿಗಿದೆ ವಿಶೇಷ ಹಿನ್ನೆಲೆ!
Duniya Vijay: ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರ ಒಂದಿಲ್ಲೊಂದು ಕಾರಣದಿಂದ ಸದ್ದು ಮಾಡುತ್ತಲೇ ಇದೆ. ಈಗ ಚಿತ್ರದ ಪ್ರಮೋಷನಲ್ ಹಾಡು ಬಿಡುಗಡೆಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈಗಾಗಲೇ ಕನ್ನಡದಲ್ಲಿ ವಿಭಿನ್ನ ಮಾದರಿಯ ಸಂಗೀತ ನಿರ್ದೇಶನದಿಂದಾಗಿ ಸಿನಿ ರಸಿಕರ ಮೆಚ್ಚುಗೆ ಗಳಿಸಿದ್ದಾರೆ ಚರಣ್ ರಾಜ್. ಈಗ ಸಲಗ ಚಿತ್ರದ ಪ್ರೊಮೋಷನಲ್ ಸಾಂಗ್ ಒಂದು ಬಿಡುಗಡೆಯಾಗಿದ್ದು, ತನ್ನ ವೈಶಿಷ್ಟ್ಯ ಹಾಗೂ ಹೊಸತನದಿಂದಾಗಿ ಅದು ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಹಾಡಿನ ಮೊದಲ ಸಾಲನ್ನು ನೀವು ಯಾರಾದರೂ ಗುನುಗಿಕೊಳ್ಳುವುದನ್ನು ಕೇಳಿರಲೇ ಬೇಕು! ಹೌದು. ‘ಟಿಣಿಂಗಾ ಮಿಣಿಂಗಾ ಟಿಶ್ಶಾ’ ಹಾಡು ಈಗ ಸಖತ್ ಸೌಂಡ್ ಮಾಡ್ತಿದೆ. ಕೇವಲ ಹಾಡಿನ ಭಿನ್ನತೆಯಿಂದಾಗಿ ಮಾತ್ರ ಅಲ್ಲ, ಹಾಡನ್ನು ಹಾಡಿದವರ ಕಾರಣದಿಂದಲೂ ಈ ಹಾಡು ಎಲ್ಲರ ಮೆಚ್ಚುಗೆಗಳಿಸಿದೆ. ಅದೇನು ವಿಶೇಷ ಅಂತೀರಾ? ಮುಂದೆ ಓದಿ.
ಕರ್ನಾಟಕದ ಅದರಲ್ಲೂ ಉತ್ತರ ಕನ್ನಡದಲ್ಲಿ ಸಿದ್ಧಿ ಸಮುದಾಯದವರು ವಾಸವಿದ್ದಾರೆ. ಅವರು ತಮ್ಮದೇ ಆದ ಸಂಸ್ಕೃತಿ, ಭಾಷೆಯನ್ನು ಹೊಂದಿರುವುದಲ್ಲದೇ, ಅವರದೇ ಆದ ಹಾಡಿನ ಪದ್ಧತಿಯೂ ಇದೆ. ಅವರ ಹಾಡನ್ನು ಹಾಗೂ ಅವರ ಸಮುದಾಯದ ಹಾಡುಗಾರರನ್ನೇ ಬಳಸಿಕೊಂಡು ‘ಟಿಣಿಂಗಾ ಮಿಣಿಂಗಾ ಟಿಶ್ಶಾ’ ಹಾಡನ್ನು ರಚಿಸಲಾಗಿದೆ. ಇದರಿಂದಾಗಿಯೇ ಹಾಡನ್ನು ಕೇಳಿದವರಿಗೆ ಹೊಸ ಮಾದರಿಯ ಹಾಡನ್ನು ಕೇಳಿದ ಅನುಭವ ಕೊಡುವುದಲ್ಲದೇ, ಕನ್ನಡ ನಾಡಿನಲ್ಲಿ ಎಷ್ಟು ವೈವಿಧ್ಯತೆಯಿದೆ ಎಂದು ಖುಷಿಪಡುವಂತಾಗಿದೆ.
ಸಲಗ ಚಿತ್ರದ ಪ್ರಮೋಷನಲ್ ಹಾಡು ‘ಟಿಣಿಂಗಾ ಮಿಣಿಂಗಾ ಟಿಶ್ಶಾ’:
ಈ ಕುರಿತು ಸಲಗ ಚಿತ್ರದ ನಿರ್ದೇಶಕ, ನಟ ದುನಿಯಾ ವಿಜಯ್ ಮಾಹಿತಿಯನ್ನು ಹಂಚಿಕೊಂಡಿದ್ದು, ಅವರ ಸ್ನೇಹಿತರ ಮುಖಾಂತರ ಅವರಿಗೆ ಸಿದ್ದಿ ಸಮುದಾಯದ ಹಾಡುಗಳನ್ನು ಕೇಳುವ ಅವಕಾಶ ಸಿಕ್ಕಿತಂತೆ. ಅದನ್ನು ತಂದು ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ಕೇಳಿಸಿದಾಗ, ಅವರು ಇಷ್ಟಪಟ್ಟು ಹಾಡು ಮಾಡಬಹುದು ಎಂದರಂತೆ. ಅಲ್ಲಿಂದ ಹುಟ್ಟಿದ್ದು ‘ಟಿಣಿಂಗಾ ಮಿಣಿಂಗಾ ಟಿಶ್ಶಾ’. ಈ ಪದದ ಅರ್ಥವನ್ನು ಕೇಳಿದಾಗ ಸುಮ್ಮನೆ ನಗುವ ವಿಜಯ್, ಅದನ್ನು ಯಾವುದಕ್ಕೆ ಬೇಕಾದರೂ ಹೇಳಬಹುದು. ಒಂದು ರೀತಿಯಲ್ಲಿ ಬಿಟ್ಟ ಸ್ಥಳ ಭರ್ತಿ ಮಾಡಿದ ಹಾಗೆ. ಎಲ್ಲಿ ಬೇಕಾದರೂ ಅದನ್ನು ತುಂಬಬಹುದು ಎಂದು ನಗುತ್ತಾರೆ.
ಈ ಹಾಡನ್ನು ಹಾಡಿದವರು ಗಿರಿಜಾ ಪಿ.ಸಿದ್ದಿ, ಗೀತಾ ಪಿ.ಸಿದ್ದಿ ಹಾಗೂ ಚನ್ನಕೇಶವ ಅವರು. ವಾದ್ಯ ನುಡಿಸಿದವರು ವಿಶ್ವನಾಥ್ ಎನ್.ಸಿದ್ದಿ. ಈ ಹಾಡು ಈಗ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ, ಪ್ರಮೋಷನಲ್ ಸಾಂಗ್ ಆದ ಇದನ್ನು ಚಿತ್ರಕ್ಕೆ ಬಳಸುತ್ತೀರಾ ಎಂಬ ಪ್ರಶ್ನೆಗೆ, ಅದು ಸರ್ಪ್ರೈಸ್ ಎನ್ನುತ್ತಾರೆ ವಿಜಯ್.
ಟಿಣಿಂಗಾ ಮಿಣಿಂಗಾ ಟಿಶ್ಶಾ ಹಾಡಿನ ಮೇಕಿಂಗ್ ವಿಡಿಯೊ:
ಸಿದ್ದಿ ಸಮುದಾಯದಲ್ಲಿ ತಲೆತಲಾಂತರದಿಂದ ಹರಿದು ಬಂದಿರುವ ಜಾನಪದ ಗೀತೆಗಳ ಕುರಿತು ಮಾತನಾಡಿರುವ ವಿಜಯ್, ‘‘ಅವರಲ್ಲಿ ಬಹಳ ವಿಶೇಷವಾದ ಹಾಡುಗಳಿವೆ. ಇದೇ ರೀತಿ ಕರ್ನಾಟಕದಾದ್ಯಂತ ಹಲವಾರು ಜಾನಪದ ಸಂಗೀತ ಪ್ರಕಾರಗಳಿವೆ. ಅವುಗಳನ್ನು ಮುಂದೆ ಚಿತ್ರಗಳಲ್ಲಿ ಬಳಸಿಕೊಳ್ಳಬೇಕು. ಎಲ್ಲರೂ ಕನ್ನಡದವರು; ನಮ್ಮ ನೆಲದವರು.’’ ಎಂದಿದ್ದಾರೆ.
ಇದನ್ನೂ ಓದಿ:
Dr Rajkumar: ಪ್ರತಿವರ್ಷ ಭೀಮನ ಅಮಾವಾಸ್ಯೆ ಹೊತ್ತು ತರುತ್ತದೆ ಡಾ.ರಾಜ್ ಅಪಹರಣದ ಕಹಿ ನೆನಪನ್ನು!
ಸೀರೆಯುಟ್ಟು ಸೊಂಟ ಬಳುಕಿಸುವ ಈ ನಟಿಯ ಒಂದೊಂದು ಫೋಟೋಕ್ಕೂ ಸಾವಿರಾರು ಅಭಿಮಾನಿಗಳು
(Tiningaa MIningaa Tishshaa Song is sung by Siddi’s and song creates Sensation in Social Media)
Published On - 3:04 pm, Sun, 8 August 21