‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ

Kousalya Supraja Rama: ಶಶಾಂಕ್​ ನಿರ್ದೇಶನದಲ್ಲಿ ಮೂಡಿಬಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾ ನೋಡಿದ ಟಿಎನ್​ ಸೀತಾರಾಮ್​, ಹಂದಲಗೆರೆ ಗಿರೀಶ್​ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ
ಟಿ.ಎನ್​. ಸೀತಾರಾಮ್​, ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​

Updated on: Aug 02, 2023 | 12:59 PM

‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’, ‘ಕೃಷ್ಣನ್​ ಲವ್​ಸ್ಟೋರಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಶಶಾಂಕ್ (Director Shashank) ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಕೌಟುಂಬಿಕ ಕಥಾಹಂದರ ಇರುವ ಈ ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ವಿಮರ್ಶಕರಿಂದ ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama) ಚಿತ್ರಕ್ಕೆ ಫುಲ್​ ಮಾರ್ಕ್ಸ್​ ಸಿಕ್ಕಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಭೇಷ್​ ಎಂದಿದ್ದಾರೆ. ಇದೆಲ್ಲದರ ಜೊತೆಗೆ ಕನ್ನಡದ ಕೆಲವು ಬರಹಗಾರರು ಸಹ ಈ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಟಿ.ಎನ್​. ಸೀತಾರಾಮ್​ (TN Seetharam) ಅವರಿಗೂ ಈ ಚಿತ್ರ ತುಂಬ ಇಷ್ಟವಾಗಿದೆ.

‘ಇದೊಂದು ಮನಪರಿವರ್ತನೆಯ ಸಿನಿಮಾ. ಅತ್ಯಂತ ಆಕರ್ಷಕವಾಗಿ ಇವತ್ತಿನ ಪ್ರೇಕ್ಷಕರ ಮನಸ್ಸು ತುಂಬುವ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಪುರುಷರ ಅಹಂಕಾರವನ್ನು ಮನಪರಿವರ್ತನೆ ಮಾಡುವಂತಹ ಸಿನಿಮಾ ಇದು’ ಎಂದು ಟಿ.ಎನ್​. ಸೀತಾರಾಮ್​ ಅವರು ಹೇಳಿದ್ದಾರೆ. ಸಿನಿಮಾ ನೋಡಿದ ಬಳಿಕ ಚುಟುಕಾಗಿ ಅವರು ತಮ್ಮ ವಿಮರ್ಶೆಯನ್ನು ತಿಳಿಸಿದ್ದಾರೆ. ‘ನಿರ್ದೇಶಕರು ನಮ್ಮ ಬದುಕಿನಿಂದಲೇ ಕಥೆಯನ್ನು ತೆಗೆದುಕೊಂಡಿದ್ದಾರೆ. ಬಹಳ ದಿನಗಳ ನಂತರ ಒಂದು ಒಳ್ಳೆಯ ಕನ್ನಡ ಸಿನಿಮಾ ನೋಡಿದ್ವಿ’ ಎಂದು ಹಂದಲಗೆರೆ ಗಿರೀಶ್​ ಹೇಳಿದ್ದಾರೆ.

ಜುಲೈ 28ರಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆ ಆಯಿತು. ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​, ಬೃಂದಾ ಆಚಾರ್ಯ, ರಂಗಾಯಣ ರಘು, ನಾಗಭೂಷಣ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ‘ಶಶಾಂಕ್​ ಸಿನಿಮಾಸ್​’ ಮತ್ತು ಬಿ.ಸಿ. ಪಾಟೀಲ್​ ಅವರ ‘ಕೌರವ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ಉತ್ತಮವಾಗಿ ಕಲೆಕ್ಷನ್​ ಆಗುತ್ತಿದ್ದು, ಅಕ್ಕ-ಪಕ್ಕದ ರಾಜ್ಯಗಳ ಪ್ರೇಕ್ಷಕರನ್ನೂ ಸೆಳೆದುಕೊಳ್ಳುತ್ತಿದೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?

ಕರ್ನಾಟಕದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆ ಬಗ್ಗೆ ಚಿತ್ರದ ಸಕ್ಸಸ್​ಮೀಟ್​ನಲ್ಲಿ ನಿರ್ಮಾಪಕ ಬಿ.ಸಿ. ಪಾಟೀಲ್​ ಅವರು ಮಾಹಿತಿ ಹಂಚಿಕೊಂಡರು. ಅರ್ಜುನ್​ ಜನ್ಯ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್​ ಆಗಿವೆ. ಜನರಿಂದ ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಗುತ್ತಿದೆ. ಹಾಗಾಗಿ ಎರಡನೇ ವಾರ ಕೂಡ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us