3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​

| Updated By: ಮದನ್​ ಕುಮಾರ್​

Updated on: Feb 19, 2022 | 1:36 PM

ರಾಘವೇಂದ್ರ ಸ್ವಾಮಿಗಳ ಕುರಿತ ಒಂದು ಅಚ್ಚರಿಯ ಪ್ರಸಂಗವನ್ನು ಜಗ್ಗೇಶ್​ ನೆನಪಿಸಿಕೊಂಡಿದ್ದಾರೆ. ಅದು ಬರೋಬ್ಬರಿ 40 ವರ್ಷಗಳ ಹಿಂದಿನ ಘಟನೆ..

3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​
ಮಂತ್ರಾಲಯದ ‘ಹುಬ್ಬಳ್ಳಿ ಧರ್ಮಶಾಲಾ’ ಆವರಣದಲ್ಲಿ ಜಗ್ಗೇಶ್​
Follow us on

ಜನಪ್ರಿಯ ನಟ ಜಗ್ಗೇಶ್​ (Jaggesh) ಅವರಿಗೆ ಅಧ್ಯಾತ್ಮದ ಬಗ್ಗೆ ಅಪಾರವಾದ ಆಸಕ್ತಿ ಇದೆ. ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅದರಲ್ಲೂ ಗುರು ರಾಘವೇಂದ್ರ ಸ್ವಾಮಿಗಳ (Raghavendra Swamy) ಬಗ್ಗೆ ಜಗ್ಗೇಶ್​ ಅವರಿಗೆ ಎಲ್ಲಿಲ್ಲದ ಭಕ್ತಿ. ತಮ್ಮ ಬದುಕಿನ ಪ್ರತಿ ಹಂತದಲ್ಲಿ ಗುರು ರಾಯರನ್ನು ಜಗ್ಗೇಶ್​ ಸ್ಮರಿಸಿಕೊಳ್ಳುತ್ತಾರೆ. ಯಾಕೆಂದರೆ, ಸಾಮಾನ್ಯ ಹಳ್ಳಿ ಹುಡುಗನೊಬ್ಬ ನಂತರ ‘ನವರಸ ನಾಯಕ’ (Navarasa Nayaka Jaggesh) ಆಗುವ ಮಟ್ಟಕ್ಕೆ ಬೆಳೆಯಲು ರಾಯರ ಕೃಪೆಯೇ ಕಾರಣ ಎಂದು ಅವರು ಬಲವಾಗಿ ನಂಬಿದ್ದಾರೆ. ಆ ನಂಬಿಕೆಯ ಬೀಜವನ್ನು ಪ್ರತಿಯೊಬ್ಬರ ಮನದಲ್ಲೂ ಅವರು ಬಿತ್ತುತ್ತಾರೆ. ತಮ್ಮ ಬದುಕಿನಲ್ಲಿ ರಾಘವೇಂದ್ರ ಸ್ವಾಮಿಗಳ ಪವಾಡ ಯಾವೆಲ್ಲ ರೀತಿ ನಡೆದಿದೆ ಎಂಬುದನ್ನು ಜಗ್ಗೇಶ ಆಗಾಗ ತಿಳಿಸಿಕೊಡುತ್ತಾರೆ. ಈಗ ಅಂಥದ್ದೇ ಒಂದು ಪ್ರಸಂಗವನ್ನು ಅವರು ನೆನಪಿಸಿಕೊಂಡಿದ್ದಾರೆ. ಅದು ಬರೋಬ್ಬರಿ 40 ವರ್ಷಗಳ ಹಿಂದಿನ ಘಟನೆ. ಅದನ್ನು ಈಗ ಜಗ್ಗೇಶ್​ ಮೆಲುಕು ಹಾಕಿದ್ದಾರೆ. ಅವರ ಬರಹ ಇಲ್ಲಿದೆ..

‘ಬಹಳ ವರ್ಷದ ನಂತರ ನಾನು ಮಂತ್ರಾಲಯದಲ್ಲಿ ಉಳಿಯುತ್ತಿದ್ದ ಹುಬ್ಬಳ್ಳಿ ಧರ್ಮ ಛತ್ರಕ್ಕೆ ಭೇಟಿಕೊಟ್ಟೆ. 1980-81ರಲ್ಲಿ ಸಿನಿಮಾರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ.  ಒಂದು ದಿನ ಛಾಯಾಗ್ರಹಕ ಹಾಗು ಗುರುಗಳು ಸುಂದರನಾಥ ಸುವರ್ಣ ಅಂಬರೀಶರವರ ‘ಗಜೇಂದ್ರ’ ಚಿತ್ರದಲ್ಲಿ ಅವಕಾಶಕ್ಕಾಗಿ ಸಹನಿರ್ದೇಶಕ ಡಿ. ಬಾಬು ಅವರಿಗೆ ಕೇಳಿಕೊಂಡರು. ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲ. ನೊಂದು ನಡೆದು ಬರುವಾಗ ಕೆಂಚಾಂಭ ಲಾಡ್ಜ್ ಬಳಿ ಒಬ್ಬ ಜೋತಿಷಿ ಕಂಡು ಕೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯ ಮಾಡೋದು ಒಬ್ಬರೇ, ಅದು ರಾಯರು ಎಂದರು’ ಎಂದು ಜಗ್ಗೇಶ್​ ಬರಹ ಆರಂಭಿಸಿದ್ದಾರೆ.

‘ಮನೆಗೆ ಬಂದಾಗ ಅಮ್ಮ ತುಳಸಿಕಟ್ಟೆ ಬಳಿ ಕೂತಿದ್ದವಳು ನನ್ನ ಕಂಡು ಲೇ ಮಗನೆ ನಿನಗೆ ಒಳ್ಳೆಯದು ಆಗಬೇಕು ಎಂದರೆ ರಾಯರ ಬಳಿ ಹೋಗು ಎಂದು ತನ್ನ ಎಲೆ-ಅಡಿಕೆ ಕಡ್ಡಿಪುಡಿಗಾಗಿ ಕೂಡಿಟ್ಟ ಹಣ 500 ರೂಪಾಯಿ ನನಗೆ ಕೊಟ್ಟಳು ಆಶ್ಚರ್ಯವಾಯಿತು. ಮರುಚಿಂತಿಸದೆ ಮಂತ್ರಾಲಯಕ್ಕೆ ಹೊರಟು, ಇರಲು ಈ ಜಾಗ ಆಯ್ಕೆ ಮಾಡಿಕೊಂಡೆ. ಆಗ ದಿನಕ್ಕೆ 25ಪೈಸ. 3 ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿ ಮನೆಗೆ ಬಂದ ತಕ್ಷಣ ಕೆ.ವಿ. ಜಯರಾಮ್ ಅವರ ‘ಶ್ವೇತಗುಲಾಭಿ’ ಚಿತ್ರದಲ್ಲಿ ಮುಖ್ಯ ಖಳನಟ ಆಗುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿಹುಡುಗ ನವರಸನಾಯಕನಾದೆ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಮುಂದೆ ನಾನು ಪರಿಮಳಾನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ 1 ತಿಂಗಳು ವಾಸಮಾಡಿದೆ. ಇದೆ ಜಾಗದಲ್ಲಿ ಒಬ್ಬ ಸಂತ ಸಿಕ್ಕು ಪರಿಮಳಾನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಎಂದಾಗ ಜೋರಾಗಿ ನಕ್ಕುಬಿಟ್ಟಳು ಅಂದು. ಇಂದು ಅದನ್ನು ನೆನೆದರೆ ಹೇಗಪ್ಪ ಇದೆಲ್ಲ ಎನ್ನುತ್ತಾಳೆ. ರಾಯರ ಕಾರುಣ್ಯ ಹಾಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯವಾಚಮನ ಶುದ್ಧಾತ್ಮನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು’ ಎಂದು ಆ ರಾಯರ ಕೃಪೆಯನ್ನು ಜಗ್ಗೇಶ್​ ಸ್ಮರಿಸಿದ್ದಾರೆ.

‘ಕೊರೊನಾ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲ. ಎರಡೂವರೆ ವರ್ಷದ ಮೇಲೆ ಮತ್ತೆ ಬಂದು ಮಂತ್ರಾಲಯ ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ. ನಿಮ್ಮ ಜೊತೆ ಹಂಚಿಕೊಳ್ಳಬೇಕು ಎಂದು ಮನಸಾಯಿತು, ಲಗತ್ತಿಸಿಬಿಟ್ಟೆ. ನನ್ನ ಭಾವನೆ… ಸಹಸ್ರದೋಷವಿರಲಿ ಬದುಕಲ್ಲಿ ಕಾಯವಾಚಮನ ರಾಯರ ನಂಬಿ ನಿಮ್ಮ ಬೆನ್ನಹಿಂದೆ ನಿಲ್ಲುವರು. ಮಂತ್ರಾಲಯಕ್ಕೆ ಬರಲು ಆಗದಿದ್ದರೆ ಚಿಂತೆಯಿಲ್ಲ. ನಿಮ್ಮ ಬಡಾವಣೆಯ ರಾಯರಮಠವೆ ಸಾಕು. ನಿಮ್ಮ ಕೂಗಿಗೆ ರಾಯರು ಕಣ್ಣುಬಿಡುತ್ತಾರೆ. ಶುಭಮಸ್ತು…’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

(ಜಗ್ಗೇಶ್ ಫೇಸ್​ಬುಕ್​ ಪೋಸ್ಟ್​)

ಇದನ್ನೂ ಓದಿ:

‘ನನಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ದು ಇದೇ ಮೊದಲು’; ಎಲ್ಲರಿಗೂ ಧನ್ಯವಾದ ತಿಳಿಸಿದ ‘ತೋತಾಪುರಿ’ ಜಗ್ಗೇಶ್​

ಚಿತ್ರರಂಗದಲ್ಲಿ ನಾನು ಇನ್ನೂ 30 ವರ್ಷ ಜರ್ನಿ ಮಾಡ್ತೀನಿ; ಜಗ್ಗೇಶ್​

Published On - 1:36 pm, Sat, 19 February 22